ನವದೆಹಲಿ: ರಾಷ್ಟ್ರೀಯ ಜನತಾದಳ (ಆರ್ ಜೆಡಿ) ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಅವರಿಗೆ ಸಿಬಿಐ ಡಿಎಲ್‌ಎಫ್ ಲಂಚ ಪ್ರಕರಣಕ್ಕೆ ಸಂಬಂಧಿಸಿ ಕ್ಲೀನ್ ಚಿಟ್ ನೀಡಿದೆ.
‘ಡಿಎಲ್‌ಎಫ್ ಲಂಚ ಪ್ರಕರಣದಲ್ಲಿ ಸಿಬಿಐ ಮಾಜಿ ರೈಲ್ವೆ ಸಚಿವ ಹಾಗೂ ರಾಷ್ಟ್ರೀಯ ಜನತಾದಳದ ನಾಯಕ ಲಾಲು ಪ್ರಸಾದ್ ಯಾದವ್ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಸಿಬಿಐನ ಆರ್ಥಿಕ ಅಪರಾಧ ಬ್ರ್ಯಾಂಚ್ ನ ಮೂಲಗಳ ಪ್ರಕಾರ, ಭ್ರಷ್ಟಾಚಾರ ಆರೋಪದ ಮೇಲೆ ರಿಯಲ್ ಎಸ್ಟೇಟ್ ಗ್ರೂಪ್ ಡಿಎಲ್ ಎಫ್ ಹಾಗೂ ಲಾಲು ಪ್ರಸಾದ್ ವಿರುದ್ಧ 2018ರಲ್ಲಿ ಪ್ರಾಥಮಿಕ ತನಿಖೆ ಆರಂಭಿಸಿರುವುದಾಗಿ ವಿವರಿಸಿದೆ.
ಮುಂಬೈನ ಬಾಂದ್ರಾದ ರೈಲ್ವೆ ಭೂ ಗುತ್ತಿಗೆ ಯೋಜನೆ ಮತ್ತು ನವದೆಹಲಿ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸುವ ಯೋಜನೆ ಮೇಲೆ ಡಿಎಲ್ ಎಫ್ ಗ್ರೂಪ್ ಕಣ್ಣಿಟ್ಟಿತ್ತು. ಮೇವು ಹಗರಣಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳಿಗಿಂತ ಹೆಚ್ಚು ಜೈಲಿನಲ್ಲಿದ್ದ ಲಾಲೂ ಪ್ರಸಾದ್ ಅವರು ಏಪ್ರಿಲ್‌ನಿಂದ ಜಾಮೀನಿನ ಮೇಲೆ ಹೊರಗಿದ್ದಾರೆ. ಲಾಲು ಯಾದವ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿತ್ತು.