Thursday, 12th December 2024

ಕಿನ್ನೌರ್ ಜಿಲ್ಲೆಯಲ್ಲಿ ಭೂಕುಸಿತ: ಅವಶೇಷಗಳಡಿ ಸಿಲುಕಿದ ವಾಹನಗಳು, 30 ಜನರು ನಾಪತ್ತೆ

ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭಾರೀ ಭೂಕುಸಿತ ಸಂಭವಿ ಸಿದ್ದು, ಅನೇಕ ವಾಹನಗಳು ಅವಶೇಷಗಳಡಿ ಸಿಲುಕಿಕೊಂಡಿವೆ.

ಮಾಹಿತಿ ಪ್ರಕಾರ, ಅವಶೇಷಗಳಡಿ ಒಬ್ಬ ವ್ಯಕ್ತಿ ಮೃತದೇಹ ಪತ್ತೆಯಾಗಿದ್ದು, 30 ಜನರು ನಾಪತ್ತೆಯಾಗಿದ್ದಾರೆ ಎಂದು ಉಪ ಆಯುಕ್ತ ಅಬಿದ್ ಹುಸೇನ್ ಸಾದಿಕ್ ಅವರು ತಿಳಿಸಿದ್ದಾರೆ.

ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆಯ(ಎಚ್‌ಆರ್‌ಟಿಸಿ) ಬಸ್ ಸೇರಿದಂತೆ ಹಲವು ವಾಹನಗಳು ಅವಶೇಷಗಳ ಅಡಿಯಲ್ಲಿ ಸಿಲುಕಿವೆ. ಬಸ್ ಕಿನ್ನೌರಿನ ರೆಕಾಂಗ್ ಪಿಯೊದಿಂದ ಶಿಮ್ಲಾಕ್ಕೆ ಹೋಗುತ್ತಿತ್ತು ಎಂದು ಹೇಳಿದ್ದಾರೆ.

ಸ್ಥಳಕ್ಕೆ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ ಡಿಆರ್ ಎಫ್) ಮತ್ತು ಸ್ಥಳೀಯ ರಕ್ಷಣಾ ತಂಡಗಳು ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಕಲ್ಲುಗಳು ಇನ್ನೂ ಬೀಳುತ್ತಿವೆ, ಇದು ರಕ್ಷಣಾ ಕಾರ್ಯಾಚರಣೆಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ಸಾದಿಕ್ ಹೇಳಿದ್ದಾರೆ. ಚಾಲಕ ಸೇರಿದಂತೆ ಆರು ಜನರನ್ನು ರಕ್ಷಿಸಲಾಗಿದೆ ಎಂದು ವರದಿಗಳು ಹೇಳುತ್ತವೆ.

ಟ್ರಕ್, ಸರ್ಕಾರಿ ಬಸ್ ಮತ್ತು ಇತರ ವಾಹನಗಳು ಅವಶೇಷಗಳಲ್ಲಿ ಹೂತು ಹೋಗಿವೆ. ರಕ್ಷಣಾ ಕಾರ್ಯಾಚರಣೆಗಾಗಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ತಂಡಗಳನ್ನು ಈ ಪ್ರದೇಶಕ್ಕೆ ಕಳುಹಿಸಲಾಗಿದೆ.