ಕೋಲ್ಕತ್ತಾ : ಪೂರ್ವ ಕೊಲ್ಕತ್ತಾದ ಶ್ರೀಭೂವಿು ದುರ್ಗಾಪೂಜೆ ಪೆಂಡಾಲ್‌ನ ಲೇಸರ್ ಪ್ರದರ್ಶನದಿಂದ ವಿಮಾನಗಳ ಲ್ಯಾಂಡಿಂಗ್‌ಗೆ ಕಷ್ಟವಾಗುತ್ತಿದೆ ಎಂದು ವಿಮಾನ ಪೈಲಟ್‌ಗಳು ದೂರು ನೀಡಿದ ಹಿನ್ನೆಲೆ ಯಲ್ಲಿ ಲೇಸರ್ ಶೋ ರದ್ದುಪಡಿಸಲಾಗಿದೆ.
ದುರ್ಗಾಪೂಜೆ ಪೆಂಡಾಲನ್ನು ದುಬೈನ ಬುರ್ಜ್ ಖಲೀಫಾ ಗಗನಚುಂಬಿ ಕಟ್ಟಡದ ಪ್ರತಿರೂಪವಾಗಿ ಸಿದ್ಧಪಡಿಸಲಾಗಿತ್ತು. ಕೊಲ್ಕತ್ತಾ ವಿಮಾನ ನಿಲ್ದಾಣ ಈ ಜನಪ್ರಿಯ ದುರ್ಗಾಪೂಜೆ ಪೆಂಡಾಲ್‌ನ ಸಮೀಪದಲ್ಲಿದೆ. ಎಟಿಸಿಗೆ ದೂರು ಬಂದ ತಕ್ಷಣ ಲೇಸರ್ ಪ್ರದರ್ಶನ ಸ್ಥಗಿತಗೊಳಿಸಲಾಯಿತು.
ಈ ಗೋಪುರದ ಎತ್ತರ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ನಿಗದಿಪಡಿಸಿದ ಮಾನದಂಡಕ್ಕೆ ಸರಿ ಇದ್ದರೂ, ವಿಮಾನ ನಿಲ್ದಾಣಗಳ ಸಮೀಪ ಲೇಸರ್ ಶೋ ನಿಷೇಧಿಸಲಾಗಿದೆ. ಏಕೆಂದರೆ ಪ್ರಬಲ ಲೇಸರ್ ಕಿರಣಗಳ ಬೆಳಕು ವಿಮಾನಗಳ ಲ್ಯಾಂಡಿಂಗ್ ವೇಳೆ ಪೈಲಟ್‌ಗಳಿಗೆ ಅಡ್ಡಿಯಾಗುತ್ತದೆ ಎಂದು ಅಧಿಕಾರಿ ವಿವರಿಸಿದ್ದಾರೆ.
ಈ ಬಾರಿ ಪೆಂಡಾಲನ್ನು ವಿಶ್ವದ ಅತಿ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಯ ಬುರ್ಜ್ ಖಲೀಫಾ ಟವರ್ ಮಾದರಿ ಯಲ್ಲಿ ನಿರ್ಮಿಸಲಾಗಿತ್ತು. ಆದರೆ ಕೋವಿಡ್ ನಿರ್ಬಂಧ ಹಿನ್ನೆಲೆಯಲ್ಲಿ ಹೆಚ್ಚಿನ ಜನ ಗುಂಪು ಸೇರುವುದನ್ನು ತಡೆಯಲು ಲೇಸರ್ ಪ್ರದರ್ಶನ ಸ್ಥಗಿತ ಗೊಳಿಸಲಾಗಿದೆ ಎಂದು ಸಂಘಟಕರು ಹೇಳಿಕೊಂಡಿದ್ದಾರೆ.
ಈ ಪೆಂಡಾಲನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅ.9ರಂದು ಉದ್ಘಾಟಿಸಿದ್ದರು. ಬುರ್ಜ್ ಖಲೀಫಾ ಪ್ರತಿಕೃತಿ ಸಿದ್ಧಪಡಿಸುವ ಸಲುವಾಗಿ ಸಂಘಟಕರು ದುಬೈಗೆ ತೆರಳಿದ್ದರು.