ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದ ಶ್ರೀನಗರದಲ್ಲಿ ನ. 2ರಂದು ಭಾರತೀಯ ಸೇನೆ ಯಶಸ್ವಿ ಕಾರ್ಯಾಚರಣೆ ನಡೆಸಿ ಲಷ್ಕರ್-ಎ-ತೊಯ್ಬಾ (Lashkar-e-Taiba)ದ ಕಮಾಂಡರ್‌ನನ್ನು ಹೊಡೆದುರುಳಿಸಿದೆ. ಅಚ್ಚರಿ ಎಂದರೆ ಈ ಕಾರ್ಯಾಚರಣೆಯಲ್ಲಿ ಬಿಸ್ಕೆಟ್‌ಗಳು ಪ್ರಮುಖ ಪಾತ್ರ ವಹಿಸಿದೆ. ಅದು ಹೇಗೆ ಎನ್ನುವ ಕುತೂಹಲಕಾರಿ ವಿವರ ಇಲ್ಲಿದೆ.
ಲಷ್ಕರ್-ಎ-ತೊಯ್ಬಾ (LeT)ದ ಪಾಕಿಸ್ತಾನಿ ಕಮಾಂಡರ್ ಉಸ್ಮಾನ್ (Usman) ವಿರುದ್ಧದ ಕಾರ್ಯಾಚರಣೆಯ ಸಮಯದಲ್ಲಿ ಬೀದಿ ನಾಯಿಗಳ ಸವಾಲನ್ನು ಎದುರಿಸಲು ಬಿಸ್ಕೆಟ್ ಹೇಗೆ ನೆರವಾಯಿತು ಎನ್ನುವುದನ್ನು ಅಧಿಕಾರಿಗಳು ವಿವರಿಸಿದ್ದಾರೆ.
#Video || Foreign Terrorist Usman Lashkari was killed in Khanyar operation in an intelligence operation. He was involved in killing of Inspector Masroor: IGP Kashmir V K Birdi@OmarAbdullah @OfficeOfLGJandK @diprjk @JmuKmrPolice @KashmirPolice @SrinagarPolice @crpf_srinagar pic.twitter.com/rBJ2Qzgptr
— KNS (@KNSKashmir) November 2, 2024
ಏನಾಗಿತ್ತು?
ಶ್ರೀನಗರದ ಜನ ನಿಬಿಡ ಖನ್ಯಾರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಎಲ್‌ಇಟಿ ಕಮಾಂಡರ್ ಉಸ್ಮಾನ್ ಸೇನೆಯ ಗುಂಡಿಗೆ ಬಲಿಯಾಗಿದ್ದಾನೆ. ಈ ಕಾರ್ಯಾಚರಣೆ ನಡೆದಿದ್ದೇ ರೋಚಕ. ಖನ್ಯಾರ್‌ನ ವಸತಿ ಪ್ರದೇಶದಲ್ಲಿ ಉಸ್ಮಾನ್ ಇರುವ ಬಗ್ಗೆ ಭದ್ರತಾ ಪಡೆಗಳಿಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಸಿಕ್ಕಿತ್ತು. 9 ಗಂಟೆಗಳ ಯೋಜನೆ ರೂಪಿಸಿ ಕಾರ್ಯಾಚರಣೆಯನ್ನು ಜಾರಿಗೆ ತರಲು ಸೇನೆ ನಿರ್ಧರಿಸಿತು. ಆದರೆ ಈ ಕಾರ್ಯಾಚರಣೆಯ ಜಾರಿಗೆ ಎದುರಾದ ಮೊದಲ, ಪ್ರಮುಖ ಸವಾಲೇ ಬೀದಿ ನಾಯಿಗಳದ್ದು. ಹೌದು, ಹಿಂದೆಲ್ಲ ಬೀದಿ ತುಂಬ ಹೆಚ್ಚಿನ ಸಂಖ್ಯೆಯಲ್ಲಿದ್ದ ನಾಯಿಗಳು ಭದ್ರತಾ ಪಡೆಗಳನ್ನು ಕಂಡ ಕೂಡಲೇ ಜೋರಾಗಿ ಬೊಗಳುತ್ತಿದ್ದವು. ಇದರಿಂದ ಉಗ್ರರು ಎಚ್ಚೆತ್ತುಕೊಂಡು ಅಡಗು ತಾಣಗಳಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದರು. ಇದೇ ಕಾರಣಕ್ಕೆ ಹಲವು ಬಾರಿ ಉಗ್ರರು ತಪ್ಪಿಸಿಕೊಂಡಿದ್ದರು.
ಹೀಗಾಗಿ ಸೇನಾ ಸಿಬ್ಬಂದಿ ಈ ಬಾರಿ ಯಾವ ಕಾರಣಕ್ಕೂ ತಮ್ಮ ಗುರಿ ತಪ್ಪದಂತೆ ಆರಂಭದಲ್ಲೇ ಯೋಜನೆ ರೂಪಿಸಿದರು. ಇದಕ್ಕೆ ಅವರು ಕಂಡುಕೊಂಡ ಉಪಾಯವೇ ಬಿಸ್ಕೆಟ್‌ಗಳು. ನಾಯಿಗಳನ್ನು ಕಂಡ ಕೂಡಲೇ ಭದ್ರತಾ ಸಿಬ್ಬಂದಿ ಅವುಗಳ ಮುಂದೆ ಬಿಸ್ಕೆಟ್ ಎಸೆದು ಬೊಗಳದಂತೆ ನೋಡಿಕೊಂಡರು. ಹೀಗೆ ಸದ್ದಾಗದಂತೆ ದಾಳಿ ನಡೆಸಿದ ಸೇನೆ ಉಸ್ಮಾನ್‌ನನ್ನು ಹತ್ಯೆ ಮಾಡಿದೆ. ಇಡೀ ಕಾರ್ಯಾಚರಣೆಯನ್ನು ಫಜ್ರ್ (ಮುಂಜಾನೆಯ ಪ್ರಾರ್ಥನೆ)ಗೆ ಮುಂಚಿತವಾಗಿ ನಡೆಸಲಾಯಿತು. ಭದ್ರತಾ ಪಡೆಗಳು 30 ಮನೆಗಳ ಸಮೂಹವನ್ನು ಸುತ್ತುವರೆದು ಗುಂಡಿನ ದಾಳಿ ನಡೆಸಿದವು.
ಎಕೆ -47, ಪಿಸ್ತೂಲ್ ಮತ್ತು ಅನೇಕ ಗ್ರೆನೇಡ್‌ಗಳನನು ಹೊಂದಿದ್ದ ಉಸ್ಮಾನ್ ಕೂಡ ಪ್ರತಿ ದಾಳಿ ನಡೆಸಿದ್ದ. ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಈ ಚಕಮಕಿ ವೇಳೆ ಅನೇಕ ಗ್ರೆನೇಡ್‌ಗಳು ಸ್ಫೋಟಗೊಂಡವು. ಸೇನೆ ಪಕ್ಕದ ಕಟ್ಟಡಗಳಿಗೆ ಬೆಂಕಿ ಹರಡದಂತೆ ನೋಡಿಕೊಂಡಿತು. ಹೀಗೆ ಅನೇಕ ಗಂಟೆಗಳ ಕಾಲ ನಡೆದ ಘರ್ಷಣೆಯ ಕೊನೆಯಲ್ಲಿ ಉಸ್ಮಾನ್ ಹತನಾಗಿದ್ದಾನೆ. ಈ ವೇಳೆ ನಾಲ್ವರು ಭದ್ರತಾ ಪಡೆಯ ಸಿಬ್ಬಂದಿಗೆ ಗಾಯಗಳಾಗಿವೆ. ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಈ ಕಾರ್ಯಾಚರಣೆಯನ್ನು ಸ್ಥಳೀಯ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF)ಯ ಸಿಬ್ಬಂದಿ ಕೈಗೊಂಡಿದ್ದರು.
ಯಾರು ಈ ಉಸ್ಮಾನ್ ?
ಹತ ಉಸ್ಮಾನ್ ಕಣಿವೆಯ ಭೂಪ್ರದೇಶದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದ. ಈತ 2000ರ ದಶಕದ ಆರಂಭದಲ್ಲಿ ತನ್ನ ಚಟುವಟಿಕೆಗಳನ್ನು ಪ್ರಾರಂಭಿಸಿದಾಗಿನಿಂದ ಹಲವು ಭಯೋತ್ಪಾದಕ ದಾಳಿಗಳನ್ನು ಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಪೊಲೀಸ್ ಇನ್ಸ್‌ಪೆಕ್ಟರ್ ಮಸ್ರೂರ್ ವಾನಿ ಅವರ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿಯೂ ಈತ ಭಾಗಿಯಾಗಿದ್ದ.
ಈ ಸುದ್ದಿಯನ್ನೂ ಓದಿ: Encounters: ಜಮ್ಮು & ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ; ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರ ಸಾವು