Monday, 16th September 2024

ದೇಶದ್ರೋಹ ಕಾನೂನಿನ ಸಾಂವಿಧಾನಿಕ ಮಾನ್ಯತೆ: ಅರ್ಜಿ ಪರಿಶೀಲನೆಗೆ ಸಮ್ಮತಿ

ನವದೆಹಲಿ: ದೇಶದ್ರೋಹ ಕಾನೂನಿನ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿರುವ ಅರ್ಜಿಗಳನ್ನು ವಿಸ್ತೃತ ಸಂವಿ ಧಾನ ಪೀಠಕ್ಕೆ ವರ್ಗಾಯಿಸಿ ಪರಿಶೀಲನೆ ನಡೆಸಲು ಸುಪ್ರೀಂ ಕೋರ್ಟ್‌ ಒಪ್ಪಿಕೊಂಡಿದೆ.

ದೇಶದ್ರೋಹ ಕಾನೂನನ್ನು ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಲಾದ ಹಲವು ಅರ್ಜಿಗಳ ವಿಚಾರಣೆ ವೇಳೆ ಮುಖ್ಯನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠವು, ಇದೇ 10ರಂದು ಈ ವಿಚಾರಣೆ ನಡೆಸುವುದಾಗಿ ಹೇಳಿದೆ.

ಈ ಅರ್ಜಿಗಳನ್ನೇ ವಜಾ ಮಾಡಬೇಕು ಎಂದು ಕೇಂದ್ರ ಸರ್ಕಾರದ ಪರ ಹಾಜರಿದ್ದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ವಾದಿಸಿದರು.

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಭದ್ರತೆಯನ್ನು ಕೇದಾರನಾಥ್ ಪ್ರಕರಣದಲ್ಲೇ ಸ್ಪಷ್ಟಪಡಿಸಲಾಗಿದೆ. ಈ ಕಾನೂನಿನ ದುರ್ಬಳಕೆ ತಡೆಯಲು ನ್ಯಾಯಾಲಯವು ಮಾರ್ಗಸೂಚಿಗಳನ್ನು ಹೊರಡಿಸಬಹುದು’ ಎಂದು ಪ್ರತಿಪಾದಿಸಿದರು. ಜತೆಗೆ ಅರ್ಜಿಗಳನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವುದನ್ನು ವಿರೋಧಿಸಿದರು.

ಅರ್ಜಿದಾರರ ಪರ ಕಪಿಲ್ ಸಿಬಲ್ ಅವರು, ಕಾನೂನಿನ ಹಲವು ಅಂಶಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸುತ್ತವೆ. ಕೇದಾರನಾಥ್ ಪ್ರಕರಣದ ತೀರ್ಪಿನ ನಂತರ ಹಲವು ದಶಕಗಳು ಕಳೆದಿವೆ, ಸಾಕಷ್ಟು ಬದಲಾವಣೆಯಾಗಿದೆ’ ಎಂದು ಹೇಳಿದರು.