ಮುಂಬೈನಲ್ಲಿ (Mumbai) ಇತ್ತೀಚೆಗೆ ಮೊಳಗಿದ ಗುಂಡಿನ ಸದ್ದಿನಲ್ಲಿ ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ (NCP leader Baba Siddique) ಹತ್ಯೆಯಾಗಿರುವುದು ಮತ್ತು ಇದರ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ (Lawrence Bishnoi) ಗ್ಯಾಂಗ್ ಹೊತ್ತುಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. 1970ರ ದಶಕದ ಅಂತ್ಯದಿಂದ ಸುಮಾರು ಮೂರು ದಶಕಗಳ ಕಾಲ ನಗರದಲ್ಲಿ ಸಕ್ರಿಯವಾಗಿದ್ದ ಗ್ಯಾಂಗ್ವಾರ್ ಮತ್ತು ಭೂಗತ ಜಗತ್ತಿನ ಭಯ ಈಗ ಮತ್ತೆ ಅವರಿಸತೊಡಗಿದೆ. ಬಿಷ್ಣೋಯ್ ಗ್ಯಾಂಗ್ ಇದನ್ನು ಜೀವಂತಗೊಳಿಸುತ್ತಿದೆ.
ಸೆಪ್ಟೆಂಬರ್ 12ರಂದು ದಕ್ಷಿಣ ದೆಹಲಿಯಲ್ಲಿ ಜಿಮ್ ಮಾಲೀಕನ ಹತ್ಯೆಯ ಹಿಂದೆಯೂ ಬಿಷ್ಣೋಯ್ ಹೆಸರು ಕೇಳಿ ಬಂದಿದ್ದು, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಆರೋಪವನ್ನು ಹೊಂದಿರುವ ಆತನನ್ನು ಗುಜರಾತ್ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಜೈಲಿನಲ್ಲಿದ್ದರೂ ಆತ ತನ್ನ ಗ್ಯಾಂಗ್ ಚಟುವಟಿಕೆಗಳನ್ನು ನಿಯಂತ್ರಿಸುತ್ತಿರುವುದು ಹೇಗೆ ಎನ್ನುವ ಪ್ರಶ್ನೆಗಳು ಉದ್ಭವವಾಗಿದೆ. ಜೊತೆಗೆ ಆತ ಹೆಸರಾಂತ ದರೋಡೆಕೋರ ಹೇಗಾದ ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.
ಲಾರೆನ್ಸ್ ಬಿಷ್ಣೋಯ್ ಯಾರು?
31 ವರ್ಷದ ಸುಲಿಗೆಕೋರ, ಹಂತಕ ಲಾರೆನ್ಸ್ ಬಿಷ್ಣೋಯ್ ಪಂಜಾಬ್ನ ಫಿರೋಜ್ಪುರ ಜಿಲ್ಲೆಯ ಧತ್ತರನ್ವಾಲಿ ಗ್ರಾಮದ ಶ್ರೀಮಂತ ಕೃಷಿಕನ ಮಗ. ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದಲ್ಲಿ ನೆಲೆಸಿರುವ ಬಿಷ್ಣೋಯ್ ಸಮುದಾಯಕ್ಕೆ ಸೇರಿದವನು. 12ನೇ ವ್ಯಾಸಂಗದ ಬಳಿಕ ಕಾಲೇಜು ಶಿಕ್ಷಣ ಮುಂದುವರಿಸಲು ಚಂಡೀಗಢಕ್ಕೆ ತೆರಳಿದ ಲಾರೆನ್ಸ್ ಬಿಷ್ಣೋಯ್ ಡಿಎವಿ ಕಾಲೇಜಿನಲ್ಲಿರುವಾಗ ವಿದ್ಯಾರ್ಥಿ ರಾಜಕೀಯಕ್ಕೆ ಸೇರಿದ. 2011 ಮತ್ತು 2012 ರ ನಡುವೆ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷನಾಗಿದ್ದ. ಈತ ಕಾನೂನು ಪದವಿಯನ್ನೂ ಗಳಿಸಿದ್ದಾನೆ.
ಅಪಾರಾಧ ಜಗತ್ತಿಗೆ ಪ್ರವೇಶ ಹೇಗೆ?
ಲಾರೆನ್ಸ್ ಬಿಷ್ಣೋಯ್ ವಿರುದ್ಧ ಮೊದಲ ಕ್ರಿಮಿನಲ್ ಪ್ರಕರಣ (ಕೊಲೆ ಯತ್ನ) 2010ರ ಏಪ್ರಿಲ್ನಲ್ಲಿ ದಾಖಲಾಗಿದೆ. ಅನಂತರ ಅತಿಕ್ರಮಣಕ್ಕಾಗಿ ಮತ್ತೊಂದು ಎಫ್ಐಆರ್ ದಾಖಲಿಸಲಾಗಿದೆ. 2011ರ ಫೆಬ್ರವರಿಯಲ್ಲಿ ಆತನ ವಿರುದ್ಧ ಹಲ್ಲೆ ಮತ್ತು ಸೆಲ್ ಫೋನ್ ದರೋಡೆ ಪ್ರಕರಣವನ್ನು ದಾಖಲಿಸಲಾಗಿದೆ. ಈ ಮೂರು ಪ್ರಕರಣಗಳು ವಿದ್ಯಾರ್ಥಿ ರಾಜಕೀಯಕ್ಕೆ ಸಂಬಂಧಿಸಿದ್ದಾಗಿತ್ತು.
2012ರಲ್ಲಿ ಬಿಷ್ಣೋಯ್ಯನ್ನು ಮೊದಲ ಬಾರಿಗೆ ಬಟಿಂಡಾದ ಜೈಲಿನಲ್ಲಿರಿಸಲಾಯಿತು. ಅನಂತರ ಕಠಿಣವಾದ ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ (MCOCA) ಆರೋಪದ ಹಿನ್ನೆಲೆಯಲ್ಲಿ ತಿಹಾರ್ ಜೈಲಿಗೆ ವರ್ಗಾಯಿಸಲಾಯಿತು. 2013ರಲ್ಲಿ ಬಿಷ್ಣೋಯ್ ಮುಕ್ತಸರ್ನ ಸರ್ಕಾರಿ ಕಾಲೇಜು ಚುನಾವಣೆಯ ವಿಜೇತ ಅಭ್ಯರ್ಥಿ ಮತ್ತು ಲುಧಿಯಾನ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಅಭ್ಯರ್ಥಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ.
ಅನೇಕ ಕ್ರಿಮಿನಲ್ ಪ್ರಕರಣಗಳಲ್ಲಿ ಬಿಷ್ಣೋಯ್ ಹೆಸರು ಕೇಳಿ ಬಂದಿದೆ. ರಾಜಕೀಯ ನಾಯಕರ ಹತ್ಯೆ, ಸುಲಿಗೆ ಸೇರಿದಂತೆ ಆತನ ವಿರುದ್ಧ 24ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅವನ ಗ್ಯಾಂಗ್ ಮದ್ಯ ವ್ಯವಹಾರ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ತೊಡಗಿಕೊಂಡಿದೆ. ಕೊಲೆಗಾರರಿಗೆ ರಕ್ಷಣೆ ನೀಡುವ ಆರೋಪವೂ ಇದೆ.
ಪ್ರಮುಖ ಸಹವರ್ತಿಗಳು ಯಾರು?
ರಾಜಕಾರಣಿಯಾಗಿ ಬದಲಾಗಿರುವ ಪಂಜಾಬ್ನ ಫಾಜಿಲ್ಕಾದ ದರೋಡೆಕೋರ ಜಸ್ವಿಂದರ್ ಸಿಂಗ್ ಅಲಿಯಾಸ್ ರಾಕಿ ಬಿಷ್ಣೋಯ್ ಗ್ಯಾಂಗ್ಗೆ ಸೇರಿದ್ದ. ರಾಜಸ್ಥಾನ- ಪಂಜಾಬ್ ಗಡಿಯಲ್ಲಿರುವ ಶ್ರೀ ಗಂಗಾನಗರ ಮತ್ತು ಭರತ್ಪುರದಂತಹ ನಗರಗಳಲ್ಲಿ ವಿದ್ಯಾರ್ಥಿ ರಾಜಕೀಯದಲ್ಲಿ ಬಿಷ್ಣೋಯಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಅವರು ಸಹಾಯ ಮಾಡಿದ್ದ. ರಾಕಿಯನ್ನು 2020ರ ಮೇ ತಿಂಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯ ಜೈಪಾಲ್ ಭುಲ್ಲರ್ ಹತ್ಯೆ ಮಾಡಿದ್ದ. ಆ ಬಳಿಕ ಭುಲ್ಲರ್ನನ್ನು ಬಿಷ್ಣೋಯ್ ಹತ್ಯೆ ಮಾಡಿದ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪ್ರಕಾರ, ಬಿಷ್ಣೋಯ್ ಗ್ಯಾಂಗ್ ಐದು ರಾಜ್ಯಗಳಲ್ಲಿ 700ಕ್ಕೂ ಹೆಚ್ಚು ಶೂಟರ್ಗಳೊಂದಿಗೆ ಅಂತಾರಾಷ್ಟ್ರೀಯ ಸಂಪರ್ಕ ಹೊಂದಿದೆ. ಇದರಲ್ಲಿ ಕನಿಷ್ಠ 300 ಶೂಟರ್ಗಳು ಪಂಜಾಬ್ನೊಂದಿಗೆ ನಂಟು ಹೊಂದಿದ್ದಾರೆ. ಬಿಷ್ಣೋಯ್ ದರೋಡೆಕೋರ ಜಗ್ಗು ಭಗವಾನ್ ಪುರಿಯಾ ಎಂಬಾತನೊಂದಿಗೆ ಸಂಬಂಧ ಹೊಂದಿದ್ದಾನೆ. ಸಂಪತ್ ನೆಹ್ರಾ ಮತ್ತು ಹರಿಯಾಣದ ದರೋಡೆಕೋರ ಕಲಾ ಜತೇದಿ ಅವರ ಸ್ನೇಹಿತರಾಗಿದ್ದಾರೆ. ಕುಖ್ಯಾತ ಸುಲಿಗೆಕೋರ ಗೋಲ್ಡಿ ಬ್ರಾರ್ನೊಂದಿಗೆ ನಿಕಟ ಸಂಪರ್ಕ ಹೊಂದಿರುವ ಬಿಷ್ಣೋಯ್ ಗಾಯಕ ಸಿಧು ಮೂಸ್ ವಾಲಾ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.
ಜೈಲಿನಿಂದ ಕಾರ್ಯಾಚರಣೆ
ಎನ್ಐಎ ಪ್ರಕಾರ ಜೈಲಿನಿಂದ ಕಾರ್ಯಾಚರಣೆ ನಡೆಸುತ್ತಿರುವ ಬಿಷ್ಣೋಯ್ ತನ್ನ ಬಲವಾದ ಸಂಪರ್ಕಗಳನ್ನು ಬಳಸುತ್ತಿದ್ದಾನೆ. ಜಾಮೀನು ಅರ್ಜಿಗಳನ್ನು ವ್ಯೂಹಾತ್ಮಕವಾಗಿ ತಪ್ಪಿಸಿಕೊಳ್ಳುವ ಆತ ಸಹಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿರಲು ವಿವಿಐಪಿ ಕರೆಗಳನ್ನು ಮಾಡುತ್ತಾನೆ ಎನ್ನಲಾಗಿದೆ. ಸುಧಾರಿತ ಸಂವಹನ ವಿಧಾನವನ್ನು ಬಳಸುತ್ತಿರುವ ಬಿಷ್ಣೋಯ್ ಪತ್ತೆಹಚ್ಚಲಾಗದ ಕರೆಗಳನ್ನು ಮಾಡುತ್ತಿದ್ದಾನೆ.
2018ರಲ್ಲಿ ಬಿಷ್ಣೋಯ್ ಸಹವರ್ತಿ ಸಂಪತ್ ನೆಹ್ರಾ ಮುಂಬೈನ ಬಾಂದ್ರಾದಲ್ಲಿರುವ ನಟ ಸಲ್ಮಾನ್ ಖಾನ್ ಅವರ ನಿವಾಸದ ಮೇಲೆ ಕಣ್ಣಿಟ್ಟಿದ್ದ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ನಟನ ಕೈವಾಡದಿಂದಾಗಿ ಖಾನ್ ಅವರನ್ನು ಹತ್ಯೆ ಮಾಡುವ ಜವಾಬ್ದಾರಿಯನ್ನು ನೆಹ್ರಾಗೆ ವಹಿಸಲಾಗಿತ್ತು. 2022ರಲ್ಲಿ ಪಂಜಾಬ್ನ ಮಾನ್ಸಾದಲ್ಲಿ ನಡೆದ ಗಾಯಕ ಮೂಸೆವಾಲಾ ಪ್ರಕರಣದಲ್ಲಿ ಬಿಷ್ಣೋಯಿ ಹೆಸರು ಮತ್ತೆ ಕೇಳಿ ಬಂದಿತ್ತು. ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಗೋಲ್ಡಿ ಬ್ರಾರ್, ಪಂಜಾಬಿ ಗಾಯಕನ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಾಗ ಬಿಷ್ಣೋಯ್ ತಿಹಾರ್ ಜೈಲಿನಲ್ಲಿದ್ದ. ಅಲ್ಲಿಂದಲೇ ಇದರ ಯೋಜನೆ ರೂಪಿಸಿರುವುದಾಗಿ ತಿಳಿದು ಬಂದಿತ್ತು.
2023ರ ಡಿಸೆಂಬರ್ನಲ್ಲಿ ಸಿಖ್ ಬಲಪಂಥೀಯ ನಾಯಕ ಸುಖದೇವ್ ಸಿಂಗ್ ಗೊಗಮೆಡಿನನ್ನು ಜೈಪುರದ ಮನೆಯಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಬಿಷ್ಣೋಯ್ ಗ್ಯಾಂಗ್ನ ಸದಸ್ಯ ರೋಹಿತ್ ಗೋಡಾರಾ ಸಾಮಾಜಿಕ ಮಾಧ್ಯಮದಲ್ಲಿ ಈ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ.
ಸಲ್ಮಾನ್ ಖಾನ್ನೊಂದಿಗಿನ ದ್ವೇಷ
ನಟ ಸಲ್ಮಾನ್ ಖಾನ್ ಅವರು 1998ರಲ್ಲಿ ರಾಜಸ್ಥಾನದಲ್ಲಿ ತಮ್ಮ ಚಲನಚಿತ್ರ ‘ಹಮ್ ಸಾಥ್ ಸಾಥ್ ಹೈ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿ ಕೊಂದ ಆರೋಪ ಹೊತ್ತಿದ್ದರು. ಅವರಿಗೆ ಕೋರ್ಟ್ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ಅನಂತರ ಅವರಿಗೆ ಜಾಮೀನು ನೀಡಲಾಯಿತು. ಕೃಷ್ಣಮೃಗಗಳನ್ನು ಬಿಷ್ಣೋಯ್ ಸಮುದಾಯವು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತದೆ.
2023ರಲ್ಲಿ ತಿಹಾರ್ ಜೈಲಿನಿಂದ ನೀಡಿರುವ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದು ತನ್ನ ಜೀವನದ ಏಕೈಕ ಉದ್ದೇಶ ಎಂದು ಬಿಷ್ಣೋಯ್ ಹೇಳಿದ್ದ. ನಮಗೆ ಹಣ ಬೇಡ. ಅವರು ನಮ್ಮ ಸಮುದಾಯದ ದೇವಸ್ಥಾನಕ್ಕೆ ಬಂದು ನಮ್ಮಲ್ಲಿ ಕ್ಷಮೆ ಯಾಚಿಸಬೇಕು ಎಂದು ನಾವು ಬಯಸುತ್ತೇವೆ. ಕೃಷ್ಣಮೃಗವನ್ನು ಬೇಟೆಯಾಡುವ ಮೂಲಕ ಅವರು ನಮ್ಮ ಇಡೀ ಸಮುದಾಯವನ್ನು ಅವಮಾನಿಸಿದ್ದರು. ಅವರ ವಿರುದ್ಧ ಕೇಸ್ ಕೂಡ ಇದೆ. ಆದರೆ ಅವರು ಕ್ಷಮೆ ಕೇಳಲು ನಿರಾಕರಿಸಿದ್ದಾರೆ ಎಂದು ಬಿಷ್ಣೋಯ್ ಹೇಳಿದ್ದಾನೆ.
ಕಳೆದ ನವೆಂಬರ್ನಲ್ಲಿ ಪಂಜಾಬಿ ಗಾಯಕ ಗಿಪ್ಪಿ ಗ್ರೆವಾಲ್ ಅವರನ್ನು ಉದ್ದೇಶಿಸಿ ಫೇಸ್ಬುಕ್ನಲ್ಲಿ ಬಿಷ್ಣೋಯ್ ಈ ಸಂದೇಶವನ್ನು ಪೋಸ್ಟ್ ಮಾಡಿದ್ದ. ಅದರಲ್ಲಿ ನೀವು ಸಲ್ಮಾನ್ ಖಾನ್ ಅವರನ್ನು ಸಹೋದರ ಎಂದು ಪರಿಗಣಿಸುತ್ತೀರಿ. ಆದರೆ ಈಗ ನಿಮ್ಮ ‘ಸಹೋದರ’ ಬಂದು ನಿಮ್ಮನ್ನು ಉಳಿಸುವ ಸಮಯ ಬಂದಿದೆ ಎಂದು ಹೇಳಿದ್ದ.
ಈ ಸಂದೇಶ ಸಲ್ಮಾನ್ ಖಾನ್ ಅವರಿಗೂ ಸೇರಿದೆ. ದಾವೂದ್ ನಿಮ್ಮನ್ನು ರಕ್ಷಿಸುತ್ತಾನೆ ಎಂಬ ಭ್ರಮೆಯಲ್ಲಿರಬೇಡಿ; ಯಾರೂ ನಿಮ್ಮನ್ನು ಉಳಿಸಲು ಸಾಧ್ಯವಿಲ್ಲ. ನೀವು ಬಯಸುವ ಯಾವುದೇ ದೇಶಕ್ಕೆ ಪಲಾಯನ ಮಾಡಿ. ಆದರೆ ನೆನಪಿಡಿ ಸಾವಿಗೆ ವೀಸಾ ಅಗತ್ಯವಿಲ್ಲ; ಇದು ಆಹ್ವಾನಿಸದೆ ಬರುತ್ತದೆ ಎಂದು ಬಿಷ್ಣೋಯ್ ತಿಳಿಸಿದ್ದ.
2024ರ ಏಪ್ರಿಲ್ ನಲ್ಲಿ ಬಾಂದ್ರಾದಲ್ಲಿರುವ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ಗುಂಡು ಹಾರಿಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಇಬ್ಬರು ಬಿಷ್ಣೋಯ್ ಗ್ಯಾಂಗ್ನೊಂದಿಗೆ ತಮ್ಮ ಸಂಪರ್ಕವನ್ನು ಒಪ್ಪಿಕೊಂಡರು.
2023ರ ಮಾರ್ಚ್ ನಲ್ಲಿ ಸಲ್ಮಾನ್ ಖಾನ್ ಅವರ ಮ್ಯಾನೇಜರ್ಗೆ ಬೆದರಿಕೆ ಇ-ಮೇಲ್ ಬಂದಿತ್ತು. ಬಳಿಕ ಬಿಷ್ಣೋಯ್ ಮತ್ತು ಆತನ ಸಹವರ್ತಿ ಮತ್ತು ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್ ಮತ್ತು ಮೋಹಿತ್ ಗಾರ್ಗ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 2022ರ ಜೂನ್ನಲ್ಲೂ ನಟನ ತಂದೆ ಸಲೀಂ ಖಾನ್ ಅವರಿಗೆ ಬಾಂದ್ರಾ ಬ್ಯಾಂಡ್ಸ್ಟ್ಯಾಂಡ್ನಲ್ಲಿ ಬೆದರಿಕೆ ಪತ್ರವನ್ನು ಇರಿಸಲಾಗಿತ್ತು. 2018 ರಲ್ಲಿ ನ್ಯಾಯಾಲಯಕ್ಕೆ ಹಾಜರಾದ ಬಿಷ್ಣೋಯ್, ನಾವು ಸಲ್ಮಾನ್ ಖಾನ್ ಅವರನ್ನು ಜೋಧ್ಪುರದಲ್ಲಿ ಕೊಲ್ಲುತ್ತೇವೆ ಎಂದು ಹೇಳಿದ್ದ.