ಛಂಡೀಗಢ: ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ (Lawrence Bishnoi Interview) ಸಂದರ್ಶನ ಮಾಡಲು ಅನುಕೂಲ ಮಾಡಿಕೊಟ್ಟ ಪಂಜಾಬ್‌ನ 7 ಪೊಲೀಸರನ್ನು ಅಮಾನತುಗೊಳಿಸಿ ಪಂಜಾಬ್(Punjab) ರಾಜ್ಯ ಗೃಹ ಇಲಾಖೆ ಆದೇಶ ನೀಡಿದೆ. ಆದೇಶ ಬಂದ ಬೆನ್ನಲ್ಲೇ 7 ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಅಮಾನತುಗೊಂಡಿರುವ ಪೊಲೀಸರಲ್ಲಿ ಡಿಎಸ್ಪಿ ಗುರ್ಶರ್ ಸಿಂಗ್ ಮತ್ತು ಸಮ್ಮರ್ ವನೀತ್ ಕೂಡ ಸೇರಿದ್ದಾರೆ.
2022 ರ ಸೆಪ್ಟೆಂಬರ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಸಿಎಎ(CAA) ವಶದಲ್ಲಿದ್ದರು. ಜೈಲಿನಲ್ಲಿದ್ದಾಗಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಷ್ಣೋಯ್ ಸಂದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ಸಂದರ್ಶನ ಪ್ರಸಾರವಾದ ನಂತರ, ಪಂಜಾಬ್ ಮತ್ತು ಹರಿಯಾಣ ನ್ಯಾಯಾಲಯವು ಈ ವಿಷಯದ ಬಗ್ಗೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿತ್ತು. ನಂತರ ಹೈಕೋರ್ಟ್ ಪೊಲೀಸ್ ಕಸ್ಟಡಿಯಲ್ಲಿದ್ದರೆ ಸಂದರ್ಶನವನ್ನು ಹೇಗೆ ಏರ್ಪಡಿಸಲಾಯಿತು ಎಂದು ಪ್ರಶ್ನೆ ಮಾಡಿತ್ತು. ಹೈಕೋರ್ಟ್ ನಿರ್ದೇಶನದ ಮೇರೆಗೆ ವಿಶೇಷ ತನಿಖಾ ತಂಡನ್ನು ರಚಿಸಿ ಹೆಚ್ಚಿನ ವಿಚಾರಣೆಗೆ ಆದೇಶ ಮಾಡಲಾಗಿತ್ತು. ಈಗ ಅದರ ವಿಚಾರಣೆ ಮುಗಿದಿದ್ದು, ವಿಶೇಷ ತನಿಖಾ ತಂಡ ನೀಡಿದ ವರದಿಯ ಆಧಾರದ ಮೇಲೆ ಶುಕ್ರವಾರ ರಾಜ್ಯ ಗೃಹ ಕಾರ್ಯದರ್ಶಿ ಗುರುಕಿರತ್ ಕಿರ್ಪಾಲ್ ಸಿಂಗ್ ಅವರು ಅಮಾನತು ಆದೇಶವನ್ನು ಹೊರಡಿಸಿದ್ದಾರೆ.
ಅಮಾನತುಗೊಂಡ ಪೊಲೀಸರಲ್ಲಿ ಡಿಎಸ್ಪಿಗಳಾದ ಗುರ್ಶರ್ ಸಿಂಗ್ ಮತ್ತು ಸಮ್ಮರ್ ವನೀತ್ , ಸಬ್-ಇನ್‌ಸ್ಪೆಕ್ಟರ್ ರೀನಾ, ಸಿಐಎ, ಖರಾರ್ (ಎಸ್‌ಎಎಸ್ ನಗರ), ಸಬ್-ಇನ್‌ಸ್ಪೆಕ್ಟರ್ (ಎಲ್‌ಆರ್) ಜಗತ್ಪಾಲ್ ಜಂಗು,ಆಗಿನ ಕರ್ತವ್ಯ ಅಧಿಕಾರಿಯಾಗಿದ್ದ ಸಬ್-ಇನ್‌ಸ್ಪೆಕ್ಟರ್ ಶಗಂಜಿತ್ ಸಿಂಗ್ ಮತ್ತು ಹೆಡ್ ಕಾನ್‌ಸ್ಟೆಬಲ್ ಓಂ ಪ್ರಕಾಶ್ ಸೇರಿದ್ದಾರೆ.
ಮೊದಲು ಲಾರೆನ್ಸ್ ಬಿಷ್ಣೋಯ್ ಸಂದರ್ಶನ ಜೈಪುರ ಸೆಂಟ್ರಲ್ ಜೈಲಿನಲ್ಲಿ ನಡೆಸಲಾಗಿದೆ ಎಂದು ಹೇಳಲಾಗುತ್ತಿತ್ತು. ನಂತರ ಈ ಸಂದರ್ಶನವು ಪಂಜಾಬ್‌ನ ಜೈಲಿನಲ್ಲಿ ನಡೆದಿರುವುದು ದೃಢಪಟ್ಟಿದೆ.
13 ವರ್ಷ ಹಳೆಯ ಪ್ರಕರಣದಲ್ಲಿ ರಿಲೀಫ್
ಮತ್ತೊಂದೆಡೆ ಮೊಹಾಲಿಯಲ್ಲಿ ವಿದ್ಯಾರ್ಥಿ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ 13 ವರ್ಷ ಹಳೆಯ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯ್ ಅವರಿಗೆ ಶುಕ್ರವಾರ ರಿಲೀಫ್ ಸಿಕ್ಕಿದೆ. ಫೆಬ್ರವರಿ 5, 2011 ರಂದು ಲಾರೆನ್ಸ್ ಬಿಷ್ಣೋಯ್ ಅವರು ಖಾಲ್ಸಾ ಕಾಲೇಜು ವಿದ್ಯಾರ್ಥಿ ಸತ್ವಿಂದರ್ ಅವರ ನಿವಾಸಕ್ಕೆ ಬಲವಂತವಾಗಿ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದ ನಂತರ ಪ್ರಕರಣ ದಾಖಲಾಗಿತ್ತು. ಅಲ್ಲದೇ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಇದೀಗ ಆ ಪ್ರಕರಣದಲ್ಲಿ ಆತನನ್ನು ನಿರ್ದೋಷಿ ಎಂದು ಕೋರ್ಟ್ ಹೇಳಿದೆ.
ಇತ್ತೀಚೆಗಷ್ಟೆ ಮುಂಬೈನಲ್ಲಿ ನಡೆದಿದ್ದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಹೊಣೆಯನ್ನು ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ 7 ಶೂಟರ್‌ಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಬಂಧಿತ ಎಲ್ಲಾ ಶೂಟರ್‌ಗಳನ್ನು ಪಂಜಾಬ್ ಮತ್ತು ಇತರ ರಾಜ್ಯಗಳಿಂದ ಬಂಧಿಸಲಾಗಿದೆ. ಶೂಟರ್‌ಗಳಿಂದ ಶಸ್ತಾಸ್ತ್ರಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: Rahul Gandhi: ಲಾರೆನ್ಸ್ ಬಿಷ್ಣೋಯ್ ಮುಂದಿನ ಟಾರ್ಗೆಟ್ ರಾಹುಲ್ ಗಾಂಧಿ!