Wednesday, 23rd October 2024

Baba Siddique : ಸಲ್ಮಾನ್ ಮೇಲಿನ ದ್ವೇಷಕ್ಕೆ ಬಾಬಾ ಸಿದ್ದಿಕಿಯನ್ನು ಕೊಲ್ಲಿಸಿದನೇ ಗ್ಯಾಂಗ್‌‌ಸ್ಟರ್ ಲಾರೆನ್ಸ್ ಬಿಷ್ಣೋಯಿ?

ಮುಂಬೈ: ಎನ್‌ಸಿಪಿ (ಅಜಿತ್ ಪವಾರ್ ಬಣ) ಮುಖಂಡ ಬಾಬಾ ಸಿದ್ದಿಕಿ (Baba Siddique) ಅವರ ಹತ್ಯೆಯಲ್ಲಿ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಮತ್ತು ನಟ ಸಲ್ಮಾನ್ ಖಾನ್ ನಡುವಿನ ದ್ವೇಷ ಸೇರಿದಂತೆ ಎಲ್ಲಾ ಸಂಭಾವ್ಯ ಕೋನಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಮುಂಬೈ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್‌ ಸಲ್ಮಾನ್ ಖಾನ್‌ಗೆ ಪದೇಪದೆ ಬೆದರಿಕೆ ಒಡ್ಡುತ್ತಿದ್ದು ಕೊಲೆ ಮಾಡುವುದಾಗಿ ಹೇಳಿದ್ದಾನೆ. ಸಲ್ಮಾನ್ ಮತ್ತು ಬಾಬಾ ಸಿದ್ದಿಕಿ ಆಪ್ತರಾಗಿರುವ ಕಾರಣ ಅದೇ ಕೋಪದಲ್ಲಿ ಹತ್ಯೆ ಮಾಡಿದ್ದಾನೆ ಎಂಬುವ ವಾದವಿದೆ. ಈ ಹಿನ್ನೆಲೆಯಲ್ಲೂ ತನಿಖೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ.

“ಬಾಬಾ ಸಿದ್ದಿಕಿ ಅವರಿಗೆ ನಿರ್ದಿಷ್ಟ ಭದ್ರತೆ ಇರಲಿಲ್ಲ ಆದರೆ ಅವರಿಗೆ ಮುಂಬೈ ಪೊಲೀಸರಿಂದ 3 ಭದ್ರತಾ ಸಿಬ್ಬಂದಿ ನೀಡಲಾಗಿತ್ತು. ಘಟನೆಯ ಸಮಯದಲ್ಲಿ, ನಮ್ಮ ಭದ್ರತಾ ಸಿಬ್ಬಂದಿಯೊಬ್ಬರು ಅವರೊಂದಿಗೆ ಇದ್ದರು. ಸಲ್ಮಾನ್ ಖಾನ್ ಮತ್ತು ಲಾರೆನ್ಸ್ ಬಿಷ್ಣೋಯ್ ಅವರ ದ್ವೇಷದ ಕೋನಗಳು ಸೇರಿದಂತೆ ಈ ಪ್ರಕರಣದ ಎಲ್ಲ ರೀತಿಯಾಗಿ ನಾವು ತನಿಖೆ ನಡೆಸುತ್ತಿದ್ದೇವೆ” ಎಂದು ಅಪರಾಧ ವಿಭಾಗದ ಡಿಸಿಪಿ ದತ್ತಾ ನಲವಾಡೆ ಎಎನ್ಐಗೆ ತಿಳಿಸಿದ್ದಾರೆ.

ವಿಜಯದಶಮಿಯಂದು ನಡೆದ ಸಿದ್ದೀಕ್ ಹತ್ಯೆಯ ಹೊಣೆ ಹೊತ್ತುಕೊಂಡಿರುವ ಬಿಷ್ಣೋಯ್, ಈ ಹಿಂದೆ ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿದ್ದ. ಏಪ್ರಿಲ್ 14 ರಂದು ಸಲ್ಮಾನ್ ವಾಸವಿರುವ ಮುಂಬೈನ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್‌ ಜತೆಗಾರರಾದ ಶೂಟರ್‌ಗಳು ಗುಂಡುಗಳನ್ನು ಹಾರಿಸಿದ್ದರು.  ಅವರೆಲ್ಲರನ್ನೂ ಬೆದರಿಸಲು ನಟನ ಮನೆಯ ಹೊರಗೆ ಗುಂಡು ಹಾರಿಸಲಾಗಿದೆ.

ಬಾಬಾ ಸಿದ್ದೀಕ್ ಹತ್ಯೆ

ಬಾಂದ್ರಾ ಪಶ್ಚಿಮದಿಂದ ಮೂರು ಬಾರಿ ಶಾಸಕರಾಗಿದ್ದ ಬಾಬಾ ಸಿದ್ದಿಕಿ ಅವರನ್ನು ಶನಿವಾರ ರಾತ್ರಿ ಮುಂಬೈನ ಬಾಂದ್ರಾದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. “ನಿನ್ನೆ, ರಾತ್ರಿ 9-9.30 ರ ನಡುವೆ, ಮಾಜಿ ರಾಜ್ಯ ಸಚಿವ ಬಾಬಾ ಸಿದ್ದಿಕಿ ಅವರನ್ನು ನಿರ್ಮಲ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅವರ ಪುತ್ರನ ಕಚೇರಿಯ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಇಬ್ಬರು ಆರೋಪಿಗಳನ್ನು ಸ್ಥಳದಲ್ಲೇ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Lawrence Bishnoi: ಲಾರೆನ್ಸ್ ಬಿಷ್ಣೋಯ್; ಈತ ದೇಶದ ಮೋಸ್ಟ್‌ ಡೇಂಜರಸ್‌ ಕ್ರಿಮಿನಲ್‌! ಜೈಲೇ ಈತನ ಹೆಡ್‌ ಕ್ವಾರ್ಟರ್‌!

ಬಾಂದ್ರಾ ಪ್ರದೇಶದ ಖೇರ್ ನಗರದಲ್ಲಿ ಶನಿವಾರ ರಾತ್ರಿ ಸಿದ್ದೀಕ್ ಅವರನ್ನು ಅವರ ಶಾಸಕ ಪುತ್ರ ಝೀಶಾನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಮೂವರು ಅಡ್ಡಗಟ್ಟಿ ಗುಂಡಿಕ್ಕಿ ಕೊಂದಿದ್ದಾರೆ. ಸಿದ್ದಿಕ್ಕಿ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ಕರೆದೊಯ್ದರೂ ಅವರು ಚಿಕಿತ್ಸೆ ಫಲಿಸದೇ ಮೃತತಪಟ್ಟಿದ್ದರು.

ಎರಡು ಪಿಸ್ತೂಲ್ ಮತ್ತು 28 ಸುತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ… ನಾವು ಆರೋಪಿಗಳನ್ನು ಅಕ್ಟೋಬರ್ 21 ರವರೆಗೆ ಕಸ್ಟಡಿಗೆ ತೆಗೆದುಕೊಂಡಿದ್ದೇವೆ . ಈ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಪಾತ್ರದ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.