ಮುಂಬೈ: ಪ್ರಸ್ತುತ ಅಹಮದಾಬಾದ್‍ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿರುವ ಲಾರೆನ್ಸ್ ಬಿಷ್ಣೋಯ್(Lawrence Bishnoi)ಗೆ ಈಗ ಸುಮಾರು 31 ವರ್ಷ. ಈತ ಈಗ ಅಂತಾರಾಷ್ಟ್ರೀಯ ಗ್ಯಾಂಗ್‌ಸ್ಟರ್. ಅವನ ಕ್ರಿಮಿನಲ್ ಜಾಲವು ಪಂಜಾಬ್, ಹರಿಯಾಣ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶವನ್ನು ವ್ಯಾಪಿಸಿದೆ. ಕಳೆದ ಕೆಲವು ವರ್ಷಗಳ ಹಿಂದೆ ಗಾಯಕ ಸಿಧು ಮೂಸೆವಾಲಾ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಗಳು ಸೇರಿದಂತೆ ಹಲವಾರು ವ್ಯಕ್ತಿಗಳ ಕೊಲೆ ಪ್ರಕರಣದಲ್ಲಿ ಇವನ ಕೈವಾಡವಿದೆ ಎನ್ನಲಾಗಿದೆ.
ಲಾರೆನ್ಸ್ ಬಿಷ್ಣೋಯ್ ಆರಂಭಿಕ ಜೀವನ ಹೇಗಿತ್ತು?
ಲಾರೆನ್ಸ್ ಬಿಷ್ಣೋಯ್ ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಧತ್ತರನ್‌ವಾಲಿ ಗ್ರಾಮದ ಶ್ರೀಮಂತ ಕೃಷಿಕ ಕುಟುಂಬದಲ್ಲಿ ಜನಿಸಿದ್ದರು. ಈತನ ತಂದೆ ಹರಿಯಾಣ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಈತನ ಕುಟುಂಬವು ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಕೂಡ ಹೊಂದಿತ್ತು. ಅಬೋಹರ್ಹೆಯ ಕಾನ್ವೆಂಟ್ ಶಾಲೆಯಲ್ಲಿ ಓದುತ್ತಿದ್ದಾಗ ಲಾರೆನ್ಸ್ ಬಿಷ್ಣೋಯ್‍ಗೆ ಸಹಪಾಠಿಯೊಬ್ಬಳ ಮೇಲೆ ಪ್ರೀತಿ ಆಗಿತ್ತಂತೆ. ಇಬ್ಬರೂ ಉನ್ನತ ಶಿಕ್ಷಣಕ್ಕಾಗಿ ಚಂಡೀಗಢದ ಡಿಎವಿ ಕಾಲೇಜಿಗೆ ಸೇರಿದಾಗ ಪರಸ್ಪರ ಪ್ರೀತಿಸಲು ಶುರು ಮಾಡಿದ್ದರಂತೆ. ಡಿಎವಿ ಕಾಲೇಜಿನಲ್ಲಿ ಓದುತ್ತಿದ್ದಾಗಲೇ, ಲಾರೆನ್ಸ್ ಬಿಷ್ಣೋಯ್‍ಗೆ ರಾಜಕೀಯದ ಬಗ್ಗೆ ತುಂಬಾ ಆಸಕ್ತಿ ಇತ್ತು. ಆ ವೇಳೆ ಅವನು ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯನ್ನು (ಎಸ್ಒಪಿಯು) ಸ್ಥಾಪಿಸಿದ. ಆದರೆ, ವಿದ್ಯಾರ್ಥಿ ಸಂಘದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಬಣದ ವಿರುದ್ಧ ಸೋತಾಗ ಸಿಕ್ಕಾಪಟ್ಟೆ ಕ್ರೋಧಗೊಂಡಿದ್ದ. ರಿವಾಲ್ವರ್ ಪಡೆದುಕೊಂಡು ಕಾಲೇಜು ರಾಜಕೀಯದಲ್ಲಿ ತನ್ನ ಪ್ರಾಬಲ್ಯವನ್ನು ಪ್ರತಿಪಾದಿಸಲು ಶುರುಮಾಡಿದ.
2011ರಲ್ಲಿ ಕಾಲೇಜು ಚುನಾವಣೆಯ ನಂತರ ಉದ್ವಿಗ್ನತೆ ಹೆಚ್ಚಾಯಿತು. ಇದರಿಂದ ಲಾರೆನ್ಸ್ ಬಿಷ್ಣೋಯ್ ಗುಂಪು ಮತ್ತು ಅವನ ವಿರೋಧಿಗಳ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆಯಿತು. ಕೊನೆಯಲ್ಲಿ ಪ್ರತಿಸ್ಪರ್ಧಿ ಬಣವು ಲಾರೆನ್ಸ್ ಬಿಷ್ಣೋಯ್‌ನ ಗೆಳತಿಯನ್ನು ಗುರಿಯಾಗಿಸಿಕೊಂಡು ಆಕೆಗೆ ಬೆಂಕಿ ಹಚ್ಚಿ ಕೊಂದರು. ಇಲ್ಲಿಗೆ ಆತನ ಪ್ರೇಮಕಥೆ ದುರಂತವಾಗಿ ಅಂತ್ಯ ಕಂಡಿತು. ಆಕೆಯ ಸಾವಿನ ನಂತರ, ಲಾರೆನ್ಸ್ ಬಿಷ್ಣೋಯ್ ಹಲವಾರು ವಿದ್ಯಾರ್ಥಿ ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳುವ ಮೂಲಕ ನಟೋರಿಯಸ್ ರೌಡಿಯಾಗಿ ಬದಲಾದ ಎನ್ನಲಾಗಿದೆ.
1998ರಲ್ಲಿ ರಾಜಸ್ಥಾನದಲ್ಲಿ ʼಹಮ್ ಸಾಥ್ ಸಾಥ್ ಹೈʼ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆಯಾಡಿದ್ದಕ್ಕೆ ಲಾರೆನ್ಸ್ ಬಿಷ್ಣೋಯ್ ನಟನಿಗೆ ಕೊಲೆ ಬೆದರಿಕೆ ಹಾಕಿದ್ದನು. ಆದರೆ ಕಳೆದ ವಾರ ಮುಂಬೈನಲ್ಲಿ ಮೂವರು ದುಷ್ಕರ್ಮಿಗಳು ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಆಪ್ತರಾಗಿದ್ದ ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ (66) ಅವರನ್ನು ಗುಂಡಿಕ್ಕಿ ಕೊಂದ ನಂತರ, ಈಗಾಗಲೇ ಜೈಲಿನಲ್ಲಿದ್ದರೂ ಕೂಡ ಸಲ್ಮಾನ್ ಖಾನ್ ವಿರುದ್ಧ ಲಾರೆನ್ಸ್ ಬಿಷ್ಣೋಯ್ ಸೇಡು ತೀರಿಸಿಕೊಳ್ಳಲು ಹಾತೊರೆಯುತ್ತಿದ್ದಾನೆ. ಸಲ್ಮಾನ್ ಮೇಲಿನ ದ್ವೇಷದಿಂದಾಗಿಯೇ ಲಾರೆನ್ಸ್ ಬಿಷ್ಣೋಯ್ ಬಾಬಾ ಸಿದ್ದಿಕಿಯನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯ ಮೈ ಏರಿದ ಹೆಬ್ಬಾವು! ವಿಡಿಯೊ ನೋಡಿ