Friday, 18th October 2024

Lawrence Bishnoi: ಮುಂಬೈ ಪೊಲೀಸರಿಗೆ ಲಾರೆನ್ಸ್ ಬಿಷ್ಣೋಯ್ ಕಸ್ಟಡಿಗೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಏಕೆ?

Lawrence Bishnoi

ಬೆಂಗಳೂರು: ಮುಂಬೈ ಪೊಲೀಸರು (Mumbai police) ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನನ್ನು (Lawrence Bishnoi) ಕಸ್ಟಡಿಗೆ (police custody) ತೆಗೆದುಕೊಳ್ಳಲು ಪದೇಪದೇ ಅರ್ಜಿಗಳನ್ನು ಸಲ್ಲಿಸುತ್ತಿದ್ದರೂ ಅವರಿಗೆ ಅದು ಇದುವರೆಗೂ ಸಾಧ್ಯವಾಗಿಲ್ಲ. ಇದಕ್ಕಾಗಿ ಸಾಕಷ್ಟು ಕಾನೂನು ಸವಾಲನ್ನು ಎದುರಿಸುತ್ತಿದ್ದಾರೆ. ಮಹಾರಾಷ್ಟ್ರದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಗ್ಯಾಂಗ್ ನಾಯಕನನ್ನು ತನಿಖೆಗಾಗಿ ತಮ್ಮ ಕಸ್ಟಡಿಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರಿಗೆ ಕಾನೂನು ಸವಾಲುಗಳು ಎದುರಾಗಿವೆ.

ಈಗಾಗಲೇ ಮುಂಬೈ ಪೊಲೀಸರು ಲಾರೆನ್ಸ್ ಬಿಷ್ಣೋಯ್ ನನ್ನು ಕಸ್ಟಡಿಗೆ ಕೋರಿ ಹಲವಾರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ ಗೃಹ ಸಚಿವಾಲಯವು ಅನುಮತಿ ನಿರಾಕರಿಸಿದೆ. ಮಾದಕವಸ್ತು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಪ್ರಸ್ತುತ ಗುಜರಾತ್‌ನ ಸಬರಮತಿಯ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ವರ್ಗಾವಣೆಗೆ ಸಚಿವಾಲಯ ಅನುಮತಿ ನಿರಾಕರಿಸಿದೆ. ಕ್ರಿಮಿನಲ್ ಪ್ರೊಸೀಜರ್ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 268 ರ ಅಡಿಯಲ್ಲಿ ಯಾವುದೇ ರಾಜ್ಯ ಅಥವಾ ಏಜೆನ್ಸಿಯು ಒಂದು ವರ್ಷದವರೆಗೆ ಆತನನ್ನು ಕಸ್ಟಡಿಗೆ ಪಡೆಯಲು ಸಾಧ್ಯವಿಲ್ಲ ಎಂದು ವರದಿ ಉಲ್ಲೇಖಿಸಿದೆ.

ಈ ಆದೇಶವು ಕೈದಿಗಳ ಚಲನವಲನವನ್ನು ನಿರ್ಬಂಧಿಸುವ ಅಧಿಕಾರವನ್ನು ಸರ್ಕಾರಕ್ಕೆ ನೀಡುತ್ತದೆ. ಅಂತಹ ವರ್ಗಾವಣೆಗಳು ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಈ ಆದೇಶವು 2024ರ ಆಗಸ್ಟ್ ರವರೆಗೆ ಜಾರಿಯಲ್ಲಿತ್ತು. ಅದನ್ನು 2025ರ ಆಗಸ್ಟ್ ವರೆಗೆ ವಿಸ್ತರಿಸಲಾಗಿದೆ ಎನ್ನಲಾಗಿದೆ.

ಜೈಲಿನಿಂದಲೇ ಕಾರ್ಯನಿರ್ವಹಿಸುತ್ತಿರುವ ಲಾರೆನ್ಸ್ ಬಿಷ್ಣೋಯ್

ಜೈಲಿನಲ್ಲಿದ್ದರೂ ಲಾರೆನ್ಸ್ ಬಿಷ್ಣೋಯ್ ಇಂಟರ್ನೆಟ್ ಸಂಪರ್ಕವಿರುವ ಮೊಬೈಲ್ ಫೋನ್‌ಗಳನ್ನು ಬಳಸುತ್ತಿದ್ದಾನೆ. ಇದರಲ್ಲಿ ಸಿಗ್ನಲ್ ಮತ್ತು ಟೆಲಿಗ್ರಾಮ್‌ನಂತಹ ಮೆಸೇಜಿಂಗ್ ಅಪ್ಲಿಕೇಶನ್‌ಗಳನ್ನು ಬಳಸುವುದರ ಜೊತೆಗೆ ವಿವಿಧ ರಾಜ್ಯಗಳಲ್ಲಿನ ತನ್ನ ಸಹವರ್ತಿ ಗ್ಯಾಂಗ್ ಸದಸ್ಯರಿಗೆ ಕರೆ ಮಾಡಲು ವಿಪಿಎನ್ ಸೇವೆಗಳನ್ನು ಸಹ ಬಳಸುತ್ತಾನೆ.

ಈ ವರ್ಷದ ಆರಂಭದಲ್ಲಿ ಪಾಕಿಸ್ತಾನ ಮೂಲದ ದರೋಡೆಕೋರ ಶಹಜಾದ್ ಭಟ್ಟಿ ಅವರ ಜೈಲಿನಿಂದ ಬಿಷ್ಣೋಯ್ ಗೆ ವೀಡಿಯೊ ಕರೆ ಬಂದಿದ್ದು, ಇದರ ಸಂಭಾಷಣೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಲಾರೆನ್ಸ್ ಬಿಷ್ಣೋಯ್ ಉತ್ತರ ಅಮೆರಿಕಾದ ಹಲವಾರು ಸಂಘಟಿತ ಅಪರಾಧ ಗ್ಯಾಂಗ್‌ಗಳೊಂದಿಗೂ ಸಂಪರ್ಕದಲ್ಲಿದ್ದಾನೆ ಎನ್ನಲಾಗಿದೆ.

India Canada row: ಕೆನಡಾದೊಂದಿಗಿನ ಬಿಕ್ಕಟ್ಟು ನಿಯಂತ್ರಿಸುವುದೇ ಭಾರತ ?

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಖಲಿಸ್ತಾನಿ ಭಯೋತ್ಪಾದಕರು ಮತ್ತು ಕೆನಡಾ ಮೂಲದ ಖಲಿಸ್ತಾನಿ ಪ್ರತ್ಯೇಕತಾವಾದಿ ಗುಂಪುಗಳೊಂದಿಗೆ ಬಲವಾದ ಸಂಬಂಧವನ್ನು ಹೊಂದಿದೆ.