Monday, 7th October 2024

Lebanon pager blast: ಪೇಜರ್‌ ಬ್ಲಾಸ್ಟ್‌ನಲ್ಲಿ ಕೇರಳದ ರಿನ್ಸನ್‌ ಜೋಸ್‌ ಕೈವಾಡ; ಅರೆಸ್ಟ್‌ ವಾರೆಂಟ್‌ ಜಾರಿಗೊಳಿಸಿದ ನಾರ್ವೆ

Lebanon pager blast

ಹೊಸದಿಲ್ಲಿ: ಲೆಬನಾನ್‌ನಲ್ಲಿ ಹೆಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ನಡೆದಿದ್ದ ಪೇಜರ್‌ ಸ್ಫೋಟ(Lebanon pager blast) ಪ್ರಕರಣದಲ್ಲಿ ಭಾಗಿ ಆರೋಪ ಎದುರಿಸುತ್ತಿರುವ ಕೇರಳ ಮೂಲದ ವ್ಯಕ್ತಿಯ ವಿರುದ್ಧ ಅಂತಾರಾಷ್ಟ್ರೀಯ ವಾರೆಂಟ್‌ ಜಾರಿಯಾಗಿದೆ. ಕೇರಳ ಮೂಲದ ನಾರ್ವೆ ಪ್ರಜೆಯಾಗಿರುವ ರಿನ್ಸನ್‌ ಜೋಸ್‌(Rinson Jose) ಎಂಬಾತನ ವಿರುದ್ಧ ಈ ಪೇಜರ್‌ಗಳನ್ನು ಹೆಜ್ಬುಲ್ಲಾಗಳಿಗೆ ಮಾರಾಟ ಮಾಡಿದ ಆರೋಪ ಕೇಳಿಬಂದಿತ್ತು. ಇದಾದ ಬಳಿಕ ಆತ ನಿಗೂಢವಾಗಿ ನಾಪತ್ತೆಯಾಗಿದ್ದ. ಇದೀಗ ಅವನ ಬೆನ್ನು ಬಿದ್ದಿರುವ ನಾರ್ವೆಯ ಭದ್ರತಾ ಪಡೆ ವಾರೆಂಟ್‌ ಜಾರಿಗೊಳಿಸಿದೆ ಎನ್ನಲಾಗಿದೆ.

ಈ ಬಗ್ಗೆ ನಾರ್ವೆಯ ಪೊಲೀಸರು ಅಧಿಕೃತ ಮಾಹಿತಿ ಹೊರ ಹಾಕಿದ್ದು, ಇರಾನ್‌ ಬೆಂಬಲಿತ ಉಗ್ರರ ಸಂಘಟನೆಯಾಗಿರುವ ಹೆಜ್ಬುಲ್ಲಾಗಳಿಗೆ ಜೋಸ್‌ ಮಾರಾಟ ಮಾಡಿದ್ದಾನೆ ಎನ್ನಲಾಗುವ ಪೇಜರ್‌ಗಳು ಸ್ಫೋಟಗೊಂಡು 39 ಜನ ಸಾವನ್ನಪ್ಪಿದ್ದರು. ಘಟನೆಯಲ್ಲಿ 3,000ಜನ ಗಂಭೀರವಾಗಿ ಗಾಯಗೊಂಡಿದ್ದರು. ಇದಾದ ಬಳಿಕ ಜೋಸ್‌ ನಾಪತ್ತೆಯಾಗಿದ್ದಾನೆ. ಹೀಗಾಗಿ ಆತನ ವಿರುದ್ಧ ಅಂತಾರಾಷ್ಟ್ರೀಯ ಅರೆಸ್ಟ್‌ ವಾರೆಂಟ್‌ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ನಾರ್ವೆಯ ನ್ಯಾಷನಲ್ ಕ್ರಿಮಿನಲ್ ಇನ್ವೆಸ್ಟಿಗೇಷನ್ ಸರ್ವೀಸ್ (ಕ್ರಿಪೋಸ್) ಈ ಬಗ್ಗೆ ದೃಢಪಡಿಸಿದೆ.

ಜೋಸ್‌ ಪಾತ್ರವೇನು?

ಬಲ್ಗೇರಿಯಾದ ಕಂಪನಿ ನಾರ್ಟಾ ಗ್ಲೋಬಲ್ ಲಿಮಿಟೆಡ್ ಪೇಜರ್‌ ಸರಬರಾಜು ಮಾಡಲು ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ನಾರ್ಟಾ ಗ್ಲೋಬಲ್ ಕಂಪನಿಯನ್ನು ನಾರ್ವೆಯ ಪ್ರಜೆ ರಿನ್ಸನ್ ಜೋಸ್ ಸ್ಥಾಪಿಸಿದ್ದಾರೆ. ಈ ರಿನ್ಸಜ್ ಜೋಸ್‌ ಕೇರಳ ಮೂಲದವರಾಗಿದ್ದು, ಈ ಪೇಜರ್‌ ಸ್ಫೋಟದ ಹಿಂದೆ ಇವರ ಕೈವಾಡ ಇದೆ ಎಂದು ಶಂಕೆ ವ್ಯಕ್ತವಾಗಿತ್ತು. ಬಲ್ಗೇರಿಯಾ ತನಿಖಾ ಸಂಸ್ಥೆ ನಮ್ಮ ದೇಶದಿಂದ ಈ ರೀತಿಯ ವಹಿವಾಟು ನಡೆದೇ ಇಲ್ಲ ಎಂದು ಹೇಳಿತ್ತು.

ರಿನ್ಸನ್ ಜೋಸ್ ವಯನಾಡ್‌ನಲ್ಲಿ ಜನಿಸಿದವರು. ಎಂಬಿಎ ಪೂರ್ಣಗೊಳಿಸಿದ ನಂತರ ನಾರ್ವೆಗೆ ತೆರಳಿದ್ದರು ಎಂದು ಕೇರಳದ ಮಾಧ್ಯಮಗಳು ವರದಿ ಮಾಡಿವೆ. ಕೆಲವು ಸ್ಥಳೀಯ ಟಿವಿ ಚಾನೆಲ್ ಗಳು ಅವರ ಸಂಬಂಧಿಕರೊಂದಿಗೆ ಮಾತನಾಡಿದ್ದು, ರಿನ್ಸನ್ ಅವರ ತಂದೆ ಜೋಸ್ ಮೂತೇದಮ್ ಟೈಲರ್ ವೃತ್ತಿ ಮಾಡುತ್ತಿದ್ದಾರೆ. ಮಾನಂತವಾಡಿಯ ಟೈಲರಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

ನಾರ್ಟಾ ಗ್ಲೋಬಲ್ ಅನ್ನು 2022ರಲ್ಲಿ ರಿನ್ಸನ್ ಜೋಸ್ ಸ್ಥಾಪಿಸಿದ್ದು, ಇದು ಬಲ್ಗೇರಿಯಾದ ರಾಜಧಾನಿ ಸೋಫಿಯಾದ ವಿಳಾಸದಲ್ಲಿದೆ. ಈ ಕಂಪನಿ 196 ಇತರ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಆದಾಗ್ಯೂ ಬಲ್ಗೇರಿಯಾದ ರಾಷ್ಟ್ರೀಯ ಭದ್ರತಾ ಸಂಸ್ಥೆ ನಡೆಸಿದ ತನಿಖೆಯಲ್ಲಿ ರಿನ್ಸನ್ ಜೋಸ್ ಮತ್ತು ಅವರ ನಾರ್ಟಾ ಗ್ಲೋಬಲ್‌ಗೆ ಕ್ಲೀನ್ ಚಿಟ್ ನೀಡಿದೆ.

ಈ ಸುದ್ದಿಯನ್ನೂ ಓದಿ: Lebanon-Israel war: ಲೆಬನಾನ್‌ ಒಳಗೇ ನುಗ್ಗಿ ಉಗ್ರರನ್ನು ಚಚ್ಚಿದ ಇಸ್ರೇಲ್‌ ಸೇನೆ