Thursday, 12th December 2024

ಎಲ್​ಐಸಿ ಹೆಸರಲ್ಲಿ ಯುಪಿಐ ಮೂಲಕ ವಂಚನೆ

ತಿರುವನಂತಪುರಂ: ಗೂಗಲ್​ ಪೇ ಮತ್ತು ಫೋನ್​ ಪೇನಂತಹ ಯುಪಿಐ (ಯೂನಿಫೈಡ್​​ ಪೇಮೆಂಟ್​ ಇಂಟರ್​ಫೇಸ್​) ವೇದಿಕೆ ಮೂಲಕ ಜನರಿಗೆ ವಂಚನೆ ಮಾಡಲು ಕ್ರಿಮಿನಲ್​ಗಳು ಹೊಸ ಹೊಸ ತಂತ್ರ ರೂಪಿಸುತ್ತಿರುವುದು ಪೊಲೀಸ್​ ಅಧಿಕಾರಿಗಳ ಕಳವಳಕ್ಕೆ ಕಾರಣವಾಗಿದೆ.

ಎಲ್​ಐಸಿ ಹೆಸರಲ್ಲಿ ವಂಚಿಸುವ ಪ್ರಯತ್ನ ನಡೆದಿತ್ತು.

ಯುವತಿಯ ತಂದೆಯಿಂದ ಫೋನ್​ ನಂಬರ್​ ಪಡೆದು ಆಕೆಗೆ ಕರೆ ಮಾಡಿದ್ದ ವಂಚಕನೊಬ್ಬ ಮಗು ಎಂದು ಮಾತು ಆರಂಭಿಸಿ, ನಿಮ್ಮ ತಂದೆಯ ಖಾತೆಗೆ 25 ಸಾವಿರ ರೂ. ಎಲ್​ಐಸಿ ಹಣ ಕಳುಹಿಸಬೇಕಿದೆ. ಆದರೆ, ನಿಮ್ಮ ತಂದೆ ಬಳಿ ಯುಪಿಐ ಖಾತೆ ಇಲ್ಲದ ಕಾರಣ ನಿಮ್ಮ ಯುಪಿಐ ನಂಬರ್​ಗೆ ಹಣ ಪಾವತಿಸುತ್ತೇನೆ ಎಂದು ಹೇಳಿದ್ದಾನೆ. ಆರಂಭದಲ್ಲಿ ಆತನ ಮಾತು ನಂಬಿದ ಯುವತಿ ತನ್ನ ಗೂಗಲ್​ ಪೇ ಮಾಹಿತಿ ನೀಡಿದ್ದಾಳೆ.

ಬಳಿಕ ವಂಚಕ 20000 ಮತ್ತು 50000 ರೂ.ನಂತೆ ಎರಡು ಬಾರಿ ಹಣದ ವಹಿವಾಟು ನಡೆಸುತ್ತಾನೆ. ನಂತರ ಮಾತು ಮುಂದುವರಿಸುವ ವಂಚಕ 5 ಸಾವಿರ ಕಳುಹಿಸುವ ಬದಲು ಮಿಸ್​ ಆಗಿ 50000 ಕಳಹಿಸಿದ್ದೇನೆ. ದಯವಿಟ್ಟು 45 ಸಾವಿರ ರೂ. ಹಣವನ್ನು ವಾಪಸ್​ ಕಳುಹಿಸು ಎಂದು ಕೇಳುತ್ತಾನೆ. ಬಹಳ ಮುಗ್ದನಂತೆ ಮಾತನಾಡುತ್ತಾನೆ. ಆತನ ಮಾತುಗಳಿಂದ ಅನುಮಾನ ಬಂದು ಗೂಗಲ್​ ಪೇ ಪರಿಶೀಲಿಸಿದಾಗ ಹಣ ಬಂದಿರುವ ಮೆಸೇಜ್​ ಮಾತ್ರ ಇರುತ್ತದೆ. ಆದರೆ, ಬ್ಯಾಂಕ್​ ಖಾತೆಗೆ ಮಾತ್ರ ಹಣ ಕ್ರೆಡಿಟ್​ ಆಗಿರುವುದಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ವಂಚಕ ತಕ್ಷಣ ಕಾಲ್​ ಕಟ್​ ಮಾಡುತ್ತಾನೆ.

ಅದೃಷ್ಟವಶಾತ್​ ಯುವತಿ ವಂಚಕನ ಜಾಲದಿಂದ ಬಚಾವ್​ ಆಗುತ್ತಾಳೆ. ಒಂದು ವೇಳೆ ಯಾಮಾರಿದ್ದರೆ, 45 ಸಾವಿರ ಹಣ ವಂಚಕ ಜೇಬು ಸೇರುತ್ತಿತ್ತು. ಇದೀಗ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನಿಖೆ ನಡೆಯುತ್ತಿದೆ.

ಇತ್ತೀಚೆಗಷ್ಟೇ ಮಹಾರಾಷ್ಟ್ರ ಮೂಲದ ಯುವತಿಯೊಬ್ಬಳು ಇನ್ನೇನು ವಂಚಕರ ಬಲೆಗೆ ಬೀಳುವಷ್ಟರಲ್ಲಿ ಬಚಾವ್​ ಆಗಿದ್ದಳು.