Friday, 22nd November 2024

’ಲಿಂಬಾವಳಿ’ ಹೆಗಲಿಗೆ ಬಂಗಾಳದಲ್ಲಿ ಕಮಲ ಅರಳಿಸುವ ಹೊಣೆ

ಬೆಂಗಳೂರು: ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಹೊಣೆಗಾರಿಕೆ ನೀಡಲಾಗಿದೆ. ಈ ಮೂಲಕ ಲಿಂಬಾವಳಿಗೆ ಮಮತಾ ಬ್ಯಾನರ್ಜಿ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿಸುವ ಮಹತ್ತರ ಹೊಣೆ ನೀಡಲಾಗಿದೆ.

ರವೀಂದ್ರನಾಥ್ ಠಾಗೂರ್ ಜನ್ಮಭೂಮಿಯಲ್ಲಿ ನಡೆಯುವ ಚುನಾವಣಾ ಪ್ರಚಾರದಲ್ಲಿ ಲಿಂಬಾವಳಿ ಭಾಗವಹಿಸಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸಾಂಪ್ರದಾಯಿಕ ಎಡಪಂಥೀಯ ಮತದಾರರ ಪ್ರಾಬಲ್ಯವಿದೆ. ತಮ್ಮ ಮಹದೇವಪುರ ಕ್ಷೇತ್ರದಲ್ಲಿ 20 ಸಾವಿರ ಬಂಗಾಳಿಗಳಿದ್ದು, ಅವರಲ್ಲಿ 5,600 ಮತದಾರರು ತಮ್ಮ ಮತ ನೋಂದಾಯಿಸಿದ್ದಾರೆ.

ತಮ್ಮ ಕ್ಷೇತ್ರದಲ್ಲಿರುವ ಬಂಗಾಳಿ ನಿವಾಸಿಗಳ ಜೊತೆ ಸಚಿವರು ಈಗಾಗಲೇ ಎರಡು ಸಭೆ ನಡೆಸಿದ್ದಾರೆ. ಬಿಜೆಪಿಗೆ ಮತ ನೀಡುವಂತೆ ಬಂಗಾಳದಲ್ಲಿರುವ ತಮ್ಮ ಸಂಬಂಧಿಕರು ಮತ್ತು ಸ್ನೇಹಿತರಿಗೂ ಬಿಜೆಪಿಗೆ ಮತ ಹಾಕುವಂತೆ ತಿಳಿಸಲು ಹೇಳಿದ್ದಾರೆನ್ನಲಾಗಿದೆ.

ಚುನಾವಣೆಯ ನಿಪುಣ ತಂತ್ರಗಾರ ಲಿಂಬಾವಳಿ ದೆಹಲಿಯ ಭೆಯಲ್ಲಿ ಪಾಲ್ಗೊಂಡು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ.

ಕಲಬುರ್ಗಿ ಪ್ರವಾಸದಲ್ಲಿದ್ದ ಸಚಿವ ಅರವಿಂದ ಲಿಂಬಾವಳಿ ಅವರಿಗೆ ದೆಹಲಿಯಿಂದ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಅವರ ತುರ್ತು ಕರೆ ಬಂದ ಕಾರಣ ತಮ್ಮ ಪ್ರವಾಸ ಮೊಟಕುಗೊಳಿಸಿ ದೆಹಲಿಗೆ ತೆರಳಿದರು.

ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ಸಿಟಿ ರವಿ, ಅಶ್ವತ್ಥ ನಾರಾಯಣ ಸೇರಿದಂತೆ ಹಲವು ಸಚಿವರು ವಿವಿಧ ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಪಾಲ್ಗೋಳ್ಳಲಿದ್ದಾರೆ.