Sunday, 15th December 2024

ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸಾ ಕೇಳುವುದೂ ಅಪರಾಧ: ಪ್ರಧಾನಿ ವಾಗ್ದಾಳಿ

ಜೈಪುರ: ಕಾಂಗ್ರೆಸ್ ಆಡಳಿತದಲ್ಲಿ ವ್ಯಕ್ತಿಯೊಬ್ಬರು ತಮ್ಮ ನಂಬಿಕೆಯನ್ನು ಅನುಸರಿಸುವುದು ಕಷ್ಟ. ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸಾ ಕೇಳುವುದೂ ಕೂಡ ಅಪರಾಧವಾಗುತ್ತದೆ ಎಂದು ಧಾನಿ ನರೇಂದ್ರ ಮೋದಿ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.

ದೇಶದಾದ್ಯಂತ ಹನುಮ ಜಯಂತಿಯನ್ನು ಆಚರಿಸುತ್ತಿದ್ದು, ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ವ್ಯಕ್ತಿಯೊಬ್ಬರು ತಮ್ಮ ನಂಬಿಕೆಯನ್ನು ಅನುಸರಿಸುವುದು ಸಹ ಕಷ್ಟವಾಗಿರುತ್ತದೆ ಮತ್ತು ಜನರ ಸಂಪತ್ತನ್ನು ಕಿತ್ತು ಕೊಂಡು ‘ಆಯ್ದ’ ಜನರಿಗೆ ಹಂಚಲು ಆಳವಾದ ಸಂಚು ರೂಪಿಸುತ್ತಿದೆ ಎಂದರು.

ನಿಮ್ಮ ಸಂಪತ್ತನ್ನು ಕಿತ್ತುಕೊಂಡು ‘ಆಯ್ದ’ ಜನರಿಗೆ ಹಂಚಲು ಕಾಂಗ್ರೆಸ್ ಆಳವಾದ ಪಿತೂರಿ ನಡೆಸುತ್ತಿದೆ ಎಂಬುದು ದೇಶದ ಮುಂದೆ ಬಯಲಾಗಿದೆ’ ಎಂದು ಅವರು ಟೋಂಕ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಹೇಳಿದರು.

ಸಂಪತ್ತಿನ ಸಮೀಕ್ಷೆ ಮಾಡುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದೆ. ಸಂಪತ್ತಿನ ಎಕ್ಸ್ ರೇ ಮಾಡುವುದಾಗಿ ಅದರ ನಾಯಕರೊಬ್ಬರು ತಮ್ಮ ಭಾಷಣದಲ್ಲಿ ಹೇಳಿದ್ದರು. ಆದರೆ, ಮೋದಿ ಈ ರಹಸ್ಯವನ್ನು ಬಯಲು ಮಾಡಿದಾಗ ಅವರ ಹಿಡನ್ ಅಜೆಂಡಾ ಹೊರಬಿತ್ತು ಮತ್ತು ಅವರಿಗೆ ಈಗ ಭಯ ಶುರುವಾಗಿದೆ ಎಂದರು.