Saturday, 23rd November 2024

ಸ್ಥಳೀಯ ಸಂಸ್ಥೆ ಚುನಾವಣೆ: ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಜಯಭೇರಿ

ಹೈದರಾಬಾದ್: ಆಂಧ್ರ ಪ್ರದೇಶದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಜಯ ಭೇರಿ ಬಾರಿಸಿದೆ. ವಿವಿಧ ಸ್ಥಳೀಯ ಸಂಸ್ಥೆಗಳ ಶೇ 90ರಷ್ಟು ಸ್ಥಾನಗಳಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಜಿಲ್ಲಾ ಪರಿಷತ್‌ನ 553 ಸ್ಥಾನಗಳಲ್ಲಿ 547 ಸ್ಥಾನಗಳಲ್ಲಿ ವೈಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಮಂಡಲ ಪರಿಷತ್‌ನ 8083 ಸ್ಥಾನದಲ್ಲಿ 7284ಕ್ಕೂ ಹೆಚ್ಚು ಸ್ಥಾನ ಜಗನ್ ಮೋಹನ್ ರೆಡ್ಡಿ ಪಕ್ಷದ ಪಾಲಾಗಿದೆ.

ಏಪ್ರಿಲ್ 8ರಂದು 553 ಜಿಲ್ಲಾ ಪರಿಷತ್, 7284 ಮಂಡಲ ಪರಿಷತ್ ಚುನಾವಣೆ ನಡೆದಿತ್ತು. ನಿಗದಿತ ವೇಳಾ ಪಟ್ಟಿಯಂತೆ ಏಪ್ರಿಲ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಬೇಕಿತ್ತು. ಆದರೆ ಟಿಡಿಪಿ, ಬಿಜೆಪಿ ಮತ್ತು ಇತರ ಪಕ್ಷಗಳು ಹೈಕೋರ್ಟ್ ಮೊರೆ ಹೋದ ಕಾರಣ ಮತ ಎಣಿಕೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಕಳೆದ ಗುರುವಾರ ಚುನಾವಣೆ ಮತ ಎಣಿಕೆ ಮಾಡಬಹುದು ಎಂದು ಹೈಕೋರ್ಟ್‌ನ ವಿಭಾಗೀಯ ಪೀಠ ಆದೇಶ ನೀಡಿತ್ತು.

ಫಲಿತಾಂಶದ ಪೈಕಿ 553 ಜಿಲ್ಲಾ ಪರಿಷತ್‌ನಲ್ಲಿ 547 ಸ್ಥಾನ ವೈಎಸ್‌ಆರ್ ಪಕ್ಷ ಗೆದ್ದಿದೆ. 2019ರ ವಿಧಾನಸಭೆ ಚುನಾವಣೆಯಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ 175 ಬಲದ ವಿಧಾನಸಭೆ ಯಲ್ಲಿ 151 ಸ್ಥಾನಗಳಲ್ಲಿ ಗೆದ್ದಿತ್ತು. ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನಗಳ ಪೈಕಿ 22ರಲ್ಲಿ ಗೆಲುವು ಸಾಧಿಸಿತ್ತು. ಚುನಾವಣೆಯಲ್ಲಿನ ಗೆಲುವಿಗೆ ಸರ್ಕಾರದ ಜನಪರ ಕಾರ್ಯಗಳೇ ಕಾರಣ ಎಂದು ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಹೇಳಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ (ಟಿಡಿಪಿ) ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ಸ್ವಯಂ ಚಂದ್ರಬಾಬು ನಾಯ್ಡು ಪ್ರತಿನಿಧಿಸುವ ಕುಪ್ಪಂ ಕ್ಷೇತ್ರದಲ್ಲಿಯೇ ಟಿಡಿಪಿ ಗೆಲುವು ಸಾಧಿಸಿಲ್ಲ. ಚುನಾವಣೆಗೆ ಕೆಲವೇ ದಿನಗಳು ಇರುವಾಗ ಚಂದ್ರಬಾಬು ನಾಯ್ಡು ಚುನಾವಣೆಯಿಂದ ದೂರ ಉಳಿಯುವುದಾಗಿ ಘೋಷಣೆ ಮಾಡಿದ್ದರು. ಆದರೆ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದರು.

ಟಿಡಿಪಿ, ಬಿಜೆಪಿ, ಜನಸೇನಾ ಪಕ್ಷಗಳು ಈ ಕುರಿತು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಈ ಚುನಾವಣೆ ಪ್ರಕ್ರಿಯೆಯಲ್ಲಿ ಯಾವುದೇ ವಿಶ್ವಾಸ ಉಳಿದಿಲ್ಲ. ಆಯೋಗ ಸರ್ಕಾರದ ರಬ್ಬರ್ ಸ್ಟಾಂಪ್ ಆಗಿದೆ. ಚುನಾವಣೆ ರದ್ದುಗೊಳಿಸು ಹೊಸದಾಗಿ ಘೋಷಣೆ ಮಾಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದವು.