Saturday, 23rd November 2024

ಗೋವಾ, ಮಣಿಪುರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್ ಮೇಕರ್

ನವದೆಹಲಿ: ಪಂಚರಾಜ್ಯ ಚುನಾವಣೆಯ ಮತ ಎಣಿಕೆ ಗುರುವಾರ ಆರಂಭಗೊಂಡಿದ್ದು, ಫಲಿತಾಂಶದ ಪ್ರಕಾರ ಗೋವಾ, ಮಣಿಪುರದಲ್ಲಿ ಭಾರತೀಯ ಜನತಾ ಪಕ್ಷ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಪಕ್ಷ ದ್ವಿತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಗೋವಾದ ಎಲ್ಲಾ 40 ವಿಧಾನಸಭಾ ಕ್ಷೇತ್ರಗಳಿಗೆ ಫೆ.14ರಂದು ಒಂದೇ ಹಂತದಲ್ಲಿ ಮತ ದಾನ ನಡೆದಿತ್ತು. ಮಣಿಪುರದಲ್ಲಿ ಫೆಬ್ರುವರಿ 28 ಮತ್ತು ಮಾರ್ಚ್ 05ರಂದು ಮತದಾನ ನಡೆದಿತ್ತು.

ಮಣಿಪುರದಲ್ಲಿ ಭಾರತೀಯ ಜನತಾ ಪಕ್ಷ 25 ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ ಪಕ್ಷ 12 ಸ್ಥಾನಗಳಲ್ಲಿ ಮುನ್ನಡೆ ಇತರರು 23 ಸ್ಥಾನ ಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. 60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 31 ಅಭ್ಯರ್ಥಿಗಳು ಗೆಲುವು ಸಾಧಿಸಬೇಕಾಗಿದೆ.

ಮಣಿಪುರದಲ್ಲಿ ಪಕ್ಷೇತರರು ಹಾಗೂ ಇತರ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಗೋವಾದಲ್ಲಿ 18 ಸ್ಥಾನಗಳಲ್ಲಿ ಭಾರತೀಯ ಜನತಾ ಪಕ್ಷ ಮುನ್ನಡೆಯಲ್ಲಿದ್ದು, 13 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸಿದೆ. ಮೊದಲ ಬಾರಿಗೆ ಆಮ್ ಆದ್ಮಿ ಪಕ್ಷ ಖಾತೆ ತೆರೆಯಲು ಮುಂದಾಗಿದೆ.

40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 21 ಸ್ಥಾನಗಳ ಅಗತ್ಯವಿದೆ. ಕಾಂಗ್ರೆಸ್ 12ರಿಂದ 17 ಸ್ಥಾನಗಳಲ್ಲಿ, ಎನ್ ಪಿಎಫ್ 3ರಿಂದ 5 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇರುವುದಾಗಿ ಸಮೀಕ್ಷೆ ತಿಳಿಸಿತ್ತು.

ಗೋವಾ ಮತ್ತು ಮಣಿಪುರದಲ್ಲಿ ಪಕ್ಷೇತರರು ಹಾಗೂ ಇತರ ಪ್ರಾದೇಶಿಕ ಪಕ್ಷಗಳೇ ಕಿಂಗ್ ಮೇಕರ್ ಗಳಾಗುವ ಸಾಧ್ಯತೆ ಗೋಚರಿಸುತ್ತಿದೆ.