ಪಟನಾ: ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿಯೇ ಗಂಡ ಹಾಗೂ ಹೆಂಡತಿ ಮೃತಪಟ್ಟಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸ್ ಠಾಣೆಗೇ ಬೆಂಕಿ ಹಚ್ಚಿದ್ದಾರೆ.
ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ, ಕಲ್ಲುತೂರಾಟ ನಡೆಸಿದ ಕಾರಣ ಪೊಲೀಸರು ಸ್ವಯಂ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಿಂದಾಗಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಹೆಚ್ಚಿನ ಪೊಲೀಸರನ್ನೂ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ವ್ಯಕ್ತಿಯೊಬ್ಬರು ತಮ್ಮ ಹೆಂಡತಿ ತೀರಿಕೊಂಡ ಬಳಿಕ 14 ವರ್ಷದ ನಾದಿನಿಯನ್ನು ಮದುವೆಯಾಗಿದ್ದರು. ಹೆಂಡತಿ ತೀರಿಕೊಂಡ ಬಳಿಕ ನಾದಿನಿಯನ್ನು ವ್ಯಕ್ತಿಯು ಮನೆಗೇ ಕರೆದುಕೊಂಡು ಬಂದಿದ್ದ. ಈ ವಿಷಯ ತಿಳಿದ ಪೊಲೀಸರು ವ್ಯಕ್ತಿ ಹಾಗೂ 14 ವರ್ಷದ ಬಾಲಕಿಯನ್ನು ಪೊಲೀಸ್ ಠಾಣೆಗೆ ಕರೆದು ಕೊಂಡು ಹೋಗಿದ್ದರು. ವ್ಯಕ್ತಿಯ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಿದ್ದರು. ಆದರೆ, ಪೊಲೀಸ್ ಠಾಣೆಯಲ್ಲಿಯೇ ವ್ಯಕ್ತಿ ಹಾಗೂ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವ್ಯಕ್ತಿ ಹಾಗೂ ಬಾಲಕಿಯನ್ನು ಪೊಲೀಸರೇ ಕೊಂದಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದ ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ದ್ದಾರೆ.
ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ವ್ಯಕ್ತಿಯು ಲಾಕಪ್ ಬಾಗಿಲು ಹತ್ತಿ, ಬಟ್ಟೆಯಿಂದ ನೇಣು ಬಿಗಿದುಕೊಂಡಿದ್ದಾನೆ. ಪೊಲೀಸರು ಸ್ವಯಂ ರಕ್ಷಣೆಗಾಗಿ ಗುಂಡು ಹಾರಿಸಿದ ಕಾರಣ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.