Sunday, 15th December 2024

ಬದುಕಿದೆಯಾ ಬಡಜೀವ! ರೈಲ್ವೆ ಹಳಿಗೆ ಬಂದಿದ್ದ 8 ಸಿಂಹಗಳ ಜೀವ ಉಳಿಸಿದ ಲೋಕೋ ಪೈಲಟ್‌ಗಳು

Loco Pilot

ಗಾಂಧಿನಗರ: ಗೂಡ್ಸ್‌ ಮತ್ತು ಪ್ಯಾಸೆಂಜರ್‌ ರೈಲುಗಳ ಲೋಕೋ ಪೈಲಟ್‌ (Loco Pilot)ಗಳು ಸಮಯೋಚಿತ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಗುಜರಾತ್‌ನ ಭಾವನಗರದಲ್ಲಿ ಕಳೆದ 2 ದಿನಗಳಲ್ಲಿ 8 ಸಿಂಹಗಳ ಜೀವ ಉಳಿದಿದೆ ಎಂದು ಮೂಲಗಳು ತಿಳಿಸಿವೆ. ಹಳಿ ದಾಟುತ್ತಿದ್ದ ಸಿಂಹಗಳನ್ನು ನೋಡಿದ ಕೂಡಲೇ ಲೋಕೋ ಪೈಲಟ್‌ಗಳು ತ್ವರಿತವಾಗಿ ಬ್ರೇಕ್‌ ಒತ್ತಿದ್ದರಿಂದ ಬಹುದೊಡ್ಡ ಅವಘಡ ತಪ್ಪಿದೆ.

ಪಶ್ಚಿಮ ರೈಲ್ವೆಯ ಭಾವನಗರ ವಿಭಾಗದ ಲೋಕೋ ಪೈಲಟ್‌ಗಳ ಕರ್ತವ್ಯ ಪ್ರಜ್ಞೆ ಮತ್ತು ಅರಣ್ಯ ಇಲಾಖೆಯ ಟ್ರ್ಯಾಕರ್‌ಗಳ ಸಹಾಯದಿಂದ ಈ ವರ್ಷ ಇದುವರೆಗೆ 104 ಸಿಂಹಗಳ ಜೀವ ಉಳಿಸಲಾಗಿದೆ ಎಂದು ಭಾವನಗರದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮಶೂಕ್ ಅಹ್ಮದ್ ತಿಳಿಸಿದ್ದಾರೆ.

ಗುರುವಾರ (ಡಿ. 12) ಹಪಾದಿಂದ ಪಿಪಾವವ್ ಬಂದರಿಗೆ ತೆರಳುತ್ತಿದ್ದ ಗೂಡ್ಸ್ ರೈಲನ್ನು ಚಾಲನೆ ಮಾಡುತ್ತಿದ್ದ ಲೋಕೋ ಪೈಲಟ್ ಧವಳಭಾಯ್ ಪಿ. ರಾಜುಲಾ ನಗರದ ಬಳಿ 5 ಸಿಂಹಗಳು ಹಳಿ ದಾಟುತ್ತಿರುವುದನ್ನು ಗಮನಿಸಿ ಬ್ರೇಕ್‌ ಹಾಕಿದ್ದಾರೆ.

ಅರಣ್ಯ ರಕ್ಷಕರು ಸ್ಥಳಕ್ಕೆ ತಲುಪಿ ಪರಿಸ್ಥಿತಿ ತಿಳಿಯಾದ ಬಳಿಕ ರೈಲು ಚಲಿಸಲು ಅನುಮತಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ. ಡಿ. 13 ಪ್ಯಾಸೆಂಜರ್ ರೈಲನ್ನು ಚಾಲನೆ ಮಾಡುತ್ತಿದ್ದ ಲೋಕೋ ಪೈಲಟ್ ಸುನಿಲ್ ಪಂಡಿತ್, ಚಲಾಲಾ-ಧಾರಿ ವಿಭಾಗದಲ್ಲಿ 2 ಮರಿಗಳೊಂದಿಗೆ ಸಿಂಹ ಹಳಿ ದಾಟುತ್ತಿರುವುದನ್ನು ಗಮನಿಸಿ ತುರ್ತು ಬ್ರೇಕ್ ಒತ್ತುವ ಮೂಲಕ ರೈಲು ನಿಲ್ಲಿಸಿ ಅಪತ್ಬಾಂಧವ ಎನಿಸಿಕೊಂಡಿದ್ದಾರೆ.

“ಮಾಹಿತಿ ಪಡೆದ ನಂತರ, ಅರಣ್ಯ ರಕ್ಷಕರು ಸ್ಥಳಕ್ಕೆ ಧಾವಿಸಿದರು. ಸಿಂಹಗಳು ರೈಲ್ವೆ ಹಳಿಯಿಂದ ದೂರ ಸರಿದಿರುವುದನ್ನು ಗಮನಿಸಿ ರೈಲು ಚಲಾಯಿಸಲು ಲೋಕೋ ಪೈಲಟ್‌ಗಳು ಅನುಮತಿ ನೀಡಿದರು” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಿಪಾವವ್ ಬಂದರನ್ನು ಉತ್ತರ ಗುಜರಾತ್‌ನೊಂದಿಗೆ ಸಂಪರ್ಕಿಸುವ ರೈಲ್ವೆ ಮಾರ್ಗದಲ್ಲಿ ಏಷ್ಯಾಟಿಕ್ ಸಿಂಹಗಳು ಸಾವನ್ನಪ್ಪುವ ಘಟನೆ ಆಗಾಗ ವರದಿಯಾಗುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ಗುಜರಾತ್ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ ಮತ್ತು ಅಂತಹ ಘಟನೆಗಳನ್ನು ತಪ್ಪಿಸಲು ಕಾರ್ಯವಿಧಾನವನ್ನು (Standard operating procedure) ತರಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಇದರ ಭಾಗವಾಗಿ ಲೋಕೋ ಪೈಲಟ್‌ಗಳು ನಿಗದಿತ ವೇಗವನ್ನು ಕಾಯ್ದುಕೊಳ್ಳಬೇಕೆಂದು ವಿಶೇಷ ಸೂಚನೆ ನೀಡಲಾಗಿದೆ. ಸಿಂಹಗಳು ರೈಲುಗಳಿಗೆ ಡಿಕ್ಕಿ ಹೊಡೆಯದಂತೆ ರಕ್ಷಿಸಲು ರಾಜ್ಯ ಅರಣ್ಯ ಇಲಾಖೆ ನಿಯಮಿತವಾಗಿ ಹಳಿಯ ಉದ್ದಕ್ಕೂ ಬೇಲಿಗಳನ್ನು ನಿರ್ಮಿಸುತ್ತಿದೆ.

ಈ ವರ್ಷ ಮಾತ್ರ ಭಾವನಗರ ರೈಲ್ವೆ ವಿಭಾಗವು ಈ ರೀತಿಯ ತ್ವರಿತ ಕ್ರಮಗಳ ಮೂಲಕ 96ಕ್ಕೂ ಹೆಚ್ಚು ಸಿಂಹಗಳನ್ನು ರಕ್ಷಿಸಿದೆ. 2024ರ ಅ. 3ರಂದು ಲೋಕೋ ಪೈಲಟ್‍ಗಳಾದ ಬಲಿರಾಮ್ ಕುಮಾರ್ ಮತ್ತು ಚಿಂತನ್ ಕುಮಾರ್ ಅವರು ಜುನಾಗಢ-ಬಿಲ್ಖಾ ವಿಭಾಗದ ಬಳಿ ಪ್ಯಾಸೆಂಜರ್ ರೈಲು ಸಂಖ್ಯೆ 09540 ಅನ್ನು ನಿಲ್ಲಿಸಿ ಸಿಂಹವನ್ನು ಸುರಕ್ಷಿತವಾಗಿ ದಾಟಲು ಅನುವು ಮಾಡಿಕೊಟ್ಟಿದ್ದರು. 2024ರಂದು ಸೆ. 19ರಂದು ಹಳಿಗಳ ಮೇಲೆ ಸಿಂಹ ಕುಳಿತಿರುವುದನ್ನು ಗಮನಿಸಿದ ಲೋಕೋ ಪೈಲಟ್‍ಗಳಾದ ಚಂದನ್ ಕುಮಾರ್ ಮತ್ತು ಜಗದೀಶ್ ಪ್ರಸಾದ್ ಅವರು ಸ್ಯಾಂಗೀರ್-ಕಾನ್ಸಿಯಾನೇಶ್ ವಿಭಾಗದ ಬಳಿ ಪ್ಯಾಸೆಂಜರ್ ರೈಲು ಸಂಖ್ಯೆ 06394 ಅನ್ನು ನಿಲ್ಲಿಸಿದ್ದರು.

ಈ ವರ್ಷದ ಆರಂಭದಲ್ಲಿ 2024ರ ಜೂ.17ರಂದು ಲೋಕೋ ಪೈಲಟ್ ಮುಖೇಶ್ ಕುಮಾರ್ ಮೀನಾ ಪಿಪಾವವ್ ಬಂದರು ನಿಲ್ದಾಣದ ಬಳಿ ಗೂಡ್ಸ್ ರೈಲನ್ನು ನಿಲ್ಲಿಸಿ 10 ಸಿಂಹಗಳ ಗುಂಪನ್ನು ಉಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:ರೈಲು ಸಂಚಾರಕ್ಕೂ ಕೋತಿಗಳ ಕಾಟ; ಅಷ್ಟಕ್ಕೂ ಆಗಿದ್ದೇನು ಗೊತ್ತಾ? ವಿಡಿಯೊ ಇದೆ