ನವದೆಹಲಿ: ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ 2024ರ ಲೋಕಸಭೆ ಸಮರದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೇರಲು ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಅ.6ರವರೆಗೆ ಬಿಡು ವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿ ಸುವರು.
ಯಾವುದೇ ಕ್ಷಣದಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಘಡ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ.
ಹೀಗಾಗಿ ಪ್ರಧಾನಿ ಮೋದಿ ಇಂದಿನಿಂದ ಅ.6ರವರೆಗೆ ಈ ಐದೂ ರಾಜ್ಯಗಳಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದು, ಚುನಾವಣಾ ಪ್ರಚಾರಕ್ಕೂ ಕಹಳೆ ಮೊಳಗಿಸಿದ್ದಾರೆ.
ಇಂದು ಛತ್ತೀಸ್‍ಘಡ ಬಿಲಾಸ್‍ಪುರ್‍ಗೆ ಭೇಟಿ ಕೊಟ್ಟಿರುವ ಮೋದಿಯವರು ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಬೆನ್ನಲೇ ಅ.3ರಂದು ಮತ್ತೆ ಛತ್ತೀಸ್‍ಘಡಕ್ಕೆ ಆಗಮಿಸಲಿರುವ ಮೋದಿ ಅವರು ಬಸ್ತರ್ ಜಿಲ್ಲೆಯ ಜಗದಲ್‍ಪುರ್‍ನಲ್ಲಿ ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾತನಾಡಲಿದ್ದಾರೆ.
ಅ.1ರಂದು ಮೋದಿಯವರು ತೆಲಂಗಾಣದ ಮೆಹಬೂಬ್ ನಗರಕ್ಕೆ ಭೇಟಿ ಕೊಡಲಿದ್ದು, ಸುಮಾರು 13,500 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಕೊಡುವರು.
ರಸ್ತೆ, ರೈಲು, ಮೆಟ್ರೋಲಿಯಂ, ನೈಸರ್ಗಿಕ ಅನಿಲ, ಉನ್ನತ ಶಿಕ್ಷಣ ಸೇರಿದಂತೆ ಪ್ರಮುಖ ಆದ್ಯತಾ ವಲಯದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಅಲ್ಲದೆ ವಿಡಿಯೋ ಕಾನರೆನ್ಸ್ ಮೂಲಕ ರೈಲ್ವೆ ಯೋಜನೆಗಳಿಗೂ ಹಸಿರು ನಿಶಾನೆ ತೋರಲಿದ್ದಾರೆ.
ಇದೇ ಸಂದರ್ಭದಲ್ಲಿ ಮೋದಿ ಅವರು ಹೈದರಾಬಾದ್‍ನಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಹೈದರಾಬಾದ್ ವಿಶ್ವವಿದ್ಯಾ ನಿಲಯ ವ್ಯಾಪ್ತಿಯಡಿ ಬರುವ ಸ್ಕೂಲ್ ಆಫ್ ಎಕಾನಾಮಿಕ್ಸ್ ಉದ್ಘಾಟನೆ ಮಾಡುವರು.
ಅ.3ರಂದು ಪುನಃ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಗೆ ಆಗಮಿಸಲಿರುವ ಮೋದಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಸಾರ್ವಜನಿಕ ರ್ಯಾಲಿಯಲ್ಲಿ ಭಾಗಿಯಾಗಿ ಭಾಷಣ ಮಾಡಲಿದ್ದಾರೆ. ಅ.2ರಂದು ಮಧ್ಯಪ್ರದೇಶದ ಗ್ವಾಲಿಯರ್‍ಗೆ ಭೇಟಿ ನೀಡಲಿ ರುವ ನರೇಂದ್ರಮೋದಿ ಬಿಜೆಪಿಯ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ ಜಬಲ್ಪುರ ಮತ್ತು ಜಗದಲ್ಪುರ್‍ಗೂ ಭೇಟಿ ಕೊಡಲಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದ ಚಿತ್ತೋರ್‍ಘಡಕ್ಕೆ ಅ.2ರಂದು ಭೇಟಿ ನೀಡಲಿರುವ ಮೋದಿ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಪ್ರಾಬಲ್ಯವಿರುವ ಈ ಪ್ರದೇಶದಲ್ಲಿ ಬಿಜೆಪಿ ಪರವಾಗಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.