Sunday, 15th December 2024

ಲೋಕಸಭೆಯಲ್ಲಿ ಕಲರ್‌ ಬಾಂಬ್‌ ಸಿಡಿಸಿದ ದುಷ್ಕರ್ಮಿಗಳು ಸಂಸದರ ಕಚೇರಿಯಿಂದ ಪಾಸ್‌ ಪಡೆದಿದ್ದರು..!

ನವದೆಹಲಿ: ಲೋಕಸಭೆಯಲ್ಲಿ ಗ್ಯಾಲರಿಯಿಂದ ಜಿಗಿದು ಸಂಸದರ ಮಧ್ಯೆ ಓಡಾಡಿ ಕಲರ್‌ ಬಾಂಬ್‌ ಸಿಡಿಸಿದ ದುಷ್ಕರ್ಮಿಗಳನ್ನು ಬಂಧಿಸಲಾಗಿದ್ದು, ಇವರಿಬ್ಬರೂ ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರ ಕಚೇರಿಯಿಂದ ಪಾಸ್‌ ಪಡೆದಿದ್ದರು ಎಂದು ತಿಳಿದುಬಂದಿದೆ.

ದುಷ್ಕರ್ಮಿಗಳು ತೆಲಂಗಾಣ ಮೂಲದವರು ಎಂದು ತಿಳಿದುಬಂದಿದೆ. ಒಬ್ಬಾತನ ಹೆಸರು ಸಾಗರ್‌ ಎನ್ನಲಾಗಿದೆ. ಸುಳ್ಳು ಹೇಳಿ ಮೈಸೂರ ಸಂಸದರ ಕಚೇರಿಯಿಂದ ಪಾಸ್‌ಗಳನ್ನು ಪಡೆದಿದ್ದರು. “ತುಂಬಾ ಒತ್ತಾಯಿಸಿ ನಮ್ಮ ಕಚೇರಿಯಿಂದ ಪಾಸ್‌ ಪಡೆದಿದ್ದರು” ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

ಕ್ಯಾನಿಸ್ಟರ್‌ಗಳನ್ನು ಹೊತ್ತಿದ್ದ ಒಬ್ಬಾತ ಲೋಕಸಭೆಯ ಒಳಗೆ ಕಲರ್‌ ಬಾಂಬ್‌ ಸಿಡಿಸಿದ್ದಾನೆ. ಇನ್ನಿಬ್ಬರು ಲೋಕಸಭೆಯ ಹೊರಗೆ ಕಲರ್‌ ಬಾಂಬ್‌ ಸಿಡಿಸಿದ್ದಾರೆ. ಮೂವರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ದುಷ್ಕರ್ಮಿಗಳು ಲೋಕಸಭೆಯ ಸಭಾಂಗಣಕ್ಕೆ ಜಿಗಿದ ಕ್ಷಣದ ಸಂಸದರ ನಡುವೆ ಕೋಲಾಹಲ ಉಂಟಾಗಿದ್ದು, ಕೆಲವು ಸಂಸದರು ಹಾಗೂ ಲೋಕಸಭೆ ಸಿಬ್ಬಂದಿ ಆತನನ್ನು ಹಿಡಿದರು. ಕೂಡಲೇ ಸ್ಪೀಕರ್‌ ಸದನವನ್ನು ಮುಂದೂಡಿದರು.

ಲೋಕಸಭೆಯ ನೇರ ಕಲಾಪದ ವಿಡಿಯೋಲ್ಲಿ, ಒಬ್ಬ ವ್ಯಕ್ತಿ ಬೆಂಚುಗಳ ಮೇಲೆ ಜಿಗಿಯುತ್ತಿರುವುದನ್ನು ಕಾಣಬಹುದು ಮತ್ತು ಇನ್ನೊಬ್ಬ ಸಂದರ್ಶಕರ ಗ್ಯಾಲರಿಯಿಂದ ತೂಗಾಡುತ್ತಾ ಹೊಗೆಯನ್ನು ಸಿಂಪಡಿಸಿದ. ನಂತರ ಲೋಕಸಭಾ ಸದಸ್ಯರು ಹಾಗೂ ಸಿಬ್ಬಂದಿ ಇವರನ್ನು ಹಿಡಿದು ಥಳಿಸಿದರು.

ಇಬ್ಬರೂ ಶೂಗಳ ಒಳಗೆ ಗ್ಯಾಸ್ ಕ್ಯಾನಿಸ್ಟರ್‌ಗಳನ್ನು ಇಟ್ಟುಕೊಂಡು ಒಳಗೆ ಕೊಂಡೊಯ್ದಿದ್ದಾರೆ. ಅವರು ಬಿಟ್ಟದ್ದು ಹಳದಿ ಹೊಗೆಯಾಗಿದೆ.

ಇತರ ಇಬ್ಬರು ವ್ಯಕ್ತಿಗಳು – ಒಬ್ಬ ಪುರುಷ ಮತ್ತು ಮಹಿಳೆ – ಹಳದಿ ಹೊಗೆಯನ್ನು ಹೊರಸೂಸುವ ಕ್ಯಾನ್‌ಗಳನ್ನು ಸಂಸತ್ತಿನ ಕಟ್ಟಡದ ಹೊರಗೆ ಸಿಡಿಸಿ ಪ್ರತಿಭಟಿಸಿದರು. ಅವರನ್ನು ಬಂಧಿಸಲಾಗಿದೆ.

ಡಿ.13ರ ಸಂಸತ್‌ ಭವನದ ಮೇಲಿನ ದಾಳಿಯ ನೆನಪಿನಲ್ಲಿ, ಸಂಸತ್‌ ಮೇಲೆ ಮತ್ತೊಮ್ಮೆ ದಾಳಿ ನಡೆಸುವುದಾಗಿ ಖಲಿಸ್ತಾನ್‌ ಉಗ್ರ ಸತ್ವಂತ್‌ ಸಿಂಗ್‌ ಪನ್ನುನ್‌ ಬೆದರಿಕೆ ಹಾಕಿದ್ದ. ಆತನಿಗೂ ಈ ಘಟನೆಗೂ ಇರಬಹುದಾದ ಲಿಂಕ್‌ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.