Thursday, 21st November 2024

ಲೋಕಸಭಾ ಚುನಾವಣೆಯ ನಾಲ್ಕನೇ ಹಂತ: ಮಧ್ಯಾಹ್ನ ಶೇ.10.35ರಷ್ಟು ಮತದಾನ

ವದೆಹಲಿ: ಲೋಕಸಭಾ ಚುನಾವಣೆಯ ನಾಲ್ಕನೇ ಹಂತ ಮತ್ತು ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಸೋಮವಾರ ಮತದಾನ ನಡೆಯುತ್ತಿದೆ.

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಸಂಸದೀಯ ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಬೆಳಗ್ಗೆ 7ಗಂಟೆಯಿಂದ ಮಧ್ಯಾಹ್ನ 9ಗಂಟೆಯವರೆಗೆ ಸರಾಸರಿ ಶೇ.10.35ರಷ್ಟು ಮತದಾನವಾಗಿದೆ.

ಬೆಳಗ್ಗೆ 9 ಗಂಟೆಯವರೆಗೆ ಮಹಾರಾಷ್ಟ್ರದಲ್ಲಿ ಶೇ. 6.45ರಷ್ಟು, ಒಡಿಶಾದಲ್ಲಿ ಶೇ. 9.23 ರಷ್ಟು, ತೆಲಂಗಾಣದಲ್ಲಿ ಶೇ. 9.51ರಷ್ಟು, ಉತ್ತರ ಪ್ರದೇಶದಲ್ಲಿ ಶೇ. 11.67ರಷ್ಟು, ಪಶ್ಚಿಮ ಬಂಗಾಳದಲ್ಲಿ ಶೇ.15.24ರಷ್ಟು, ಆಂಧ್ರ ಪ್ರದೇಶದಲ್ಲಿ ಶೇ. 9.05ರಷ್ಟು, ಬಿಹಾರದಲ್ಲಿ ಶೇ. 10.18ರಷ್ಟು, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ. 5.07 ರಷ್ಟು, ಜಾರ್ಖಂಡ್ ನಲ್ಲಿ ಶೇ. 11.78ರಷ್ಟು, ಮಧ್ಯಪ್ರದೇಶದಲ್ಲಿ ಶೇ. 14.97ರಷ್ಟು ಮತದಾರರು ಮತ ಚಲಾಯಿಸಿದ್ದಾರೆ ಎಂದು ಅಂದಾಜಿಸಲಾಗಿದೆ.

ಆಂಧ್ರಪ್ರದೇಶದ ಪಾಲನಾಡಿನ ಕೆಲವೆಡೆ ಹಾಗೂ ಒಂಗೋಲ್ ನ ದಾರ್ಸಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಹಿಂಸಾಚಾರ ನಡೆದಿದೆ. ಪಶ್ಚಿಮ ಬಂಗಾಳ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದ್ದು. ಪಶ್ಚಿಮ ಬರ್ಧಮಾನ್‌ ಜಿಲ್ಲೆಯ ದುರ್ಗಾಪುರದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.

ಮೊದಲ ಎರಡು ಗಂಟೆಗಳಲ್ಲಿ ಹಲವು ರಾಜ್ಯಗಳಲ್ಲಿ ಶೇ.10ಕ್ಕಿಂತ ಹೆಚ್ಚು ಮತದಾನವಾಗಿದೆ. ಆಂಧ್ರಪ್ರದೇಶದಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇ 9.05 ರಷ್ಟು ಮತದಾನವಾಗಿದ್ದು, ತೆಲಂಗಾಣದಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇ 9.51ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ಬಹಿರಂಗಪಡಿಸಿದ್ದಾರೆ.