ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಭಾರಿಗೆ ದೇಶದ ಚುಕ್ಕಾಣೆ ಹಿಡಿದಿದ್ದಾರೆ. ಇದೀಗ 18ನೇ ಲೋಕಸಭೆಯ ಮೊದಲ ಅಧಿವೇಶನಕ್ಕೆ ದಿನಾಂಕ್ ಫಿಕ್ಸ್ ಆಗಿದೆ. ಸಂಸತ್‌ನಲ್ಲಿ 18ನೇ ಲೋಕಸಭೆಯ ಮೊದಲ ಅಧಿವೇಶನವು ಇದೇ ಜೂನ್ 24 ರಂದು ಆರಂಭಗೊಳ್ಳಲಿದೆ.
ಹತ್ತು ದಿನಗಳ ಅಧಿವೇಶನ ಇದಾಗಿರಲಿದೆ ಎಂದು ಬುಧವಾರ ನೂತನ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾಹಿತಿ ನೀಡಿದರು.
ಲೋಕಸಭೆಯ ಮೊದಲ ಅಧಿವೇಶನ ಇದೇ ಜೂ.24ರಂದು ಜೂಲೈ 3ರವರೆಗೆ ಜರುಗಲಿದೆ. ಈ ವೇಳೆ ಹೊಸದಾಗಿ ಚುನಾಯಿತ ಸದಸ್ಯರ ಪ್ರಮಾಣ/ದೃಢೀಕರಣ, ಸ್ಪೀಕರ್ ಆಯ್ಕೆ, ಅಧ್ಯಕ್ಷರ ಭಾಷಣ ಮತ್ತು ಅದರ ಮೇಲಿನ ಚರ್ಚೆಗಳು ನಡೆಯಲಿವೆ ಎಂದರು.
ರಾಜ್ಯಸಭೆಯ 264ನೇ ಅಧಿವೇಶನವು ಇದೇ ಜೂ.27ರಿದ ಆರಂಭವಾಗಿ ಜುಲೈ 3ರಂದು ಮುಕ್ತಾಯಗೊಳ್ಳುತ್ತದೆ ಎಂದು ಮಾಹಿತಿ ನೀಡಿದರು.
ಇನ್ನೂ ಸಂಸತ್ ಅಧಿವೇಶನದಲ್ಲಿ ಸದನದ ಕಲಾಪ ಸುಸೂತ್ರವಾಗಿ ನಡೆಯಬೇಕು. ಇಲ್ಲಿ ಒಬ್ಬರು ಇನ್ನೊಬ್ಬರ ಕಾಲು ಎಳೆಯುವ ಅಗತ್ಯವಿಲ್ಲ. ಅಧಿವೇಶನ ಒಂದು ಉತ್ತಮ ಮತ್ತು ಧನಾತ್ಮಕ ಚರ್ಚೆಗಳಿಗೆ, ಮಹತ್ತರ ವಿಷಯಗಳ ಚರ್ಚೆಗೆ ಬಳಕೆ ಆಗಬೇಕು ಎಂದು ಗಮನ ಸೆಳೆದರು.
ಕಿರಣ್ ರಿಜಿಜು ಅವರು ಅಧಿಕಾರ ವಹಿಸಿಕೊಳ್ಳುವ ಮೊದಲು, ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಈ ಖಾತೆ ಕುರಿತು ಟೀಕಿಸಿದ್ದರು.
ಪ್ರಧಾನಿ ನರೇಂದ್ರ ಮೋದಿಯವರು ಕಳೆದ ದಶಕದಲ್ಲಿ ಅವರು ನಡೆಸಿದ ವಿಧಾನಕ್ಕಿಂತ ಭಿನ್ನವಾಗಿ ಸಂಸತ್ತು ಕಾರ್ಯ ನಿರ್ವಹಿಸಬೇಕೆಂದು ಬಯಸುತ್ತಾರೆ. ಸಂಸದೀಯ ವ್ಯವಹಾರಗಳ ಖಾತೆಗಳ ಹಂಚಿಕೆಯು ಈ ಭಾರಿ ವಿಶ್ವಾಸ ತರುವುದಿಲ್ಲ ಎಂದು ವ್ಯಂಗ್ಯವಾಡಿದ್ದರು.
ಪ್ರಸ್ತುತ ಸದನದಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ 293 ಸಂಸದರನ್ನು ಹೊಂದಿದ್ದರೆ ಪ್ರತಿಪಕ್ಷ I.N.D.I.A ಮೈತ್ರಿಕೂಟವು 240 ಸ್ಥಾನಗಳನ್ನು ಹೊಂದುವ ಮೂಲಕ ವಿಪಕ್ಷ ಸ್ಥಾನದಲ್ಲಿ ಕೂತಿದ್ದಾರೆ.