Friday, 22nd November 2024

Swiggy IPO : ಐಪಿಒಗೆ ಮುಂಚಿತವಾಗಿಯೇ ಸ್ವಿಗ್ಗಿಯಲ್ಲಿ ಹೂಡಿಕೆ ಮಾಡಿದ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್

Swiggy IPO

ಬೆಂಗಳೂರು: ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ (Madhuri Dixit) ಮತ್ತು ಇನ್ನೋವ್ 8 ಸಂಸ್ಥಾಪಕರಾಗಿರುವ ರಿತೇಶ್ ಮಲಿಕ್‌ ಫುಡ್ ಡೆಲಿವರಿ ಸಂಸ್ಥೆ ಸ್ವಿಗ್ಗಿ ಸೆಕೆಂಡರಿ ಮಾರ್ಕೆಟ್ ಮೂಲಕ 3 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ. ನಟಿ ಮಾಧುರಿ ದೀಕ್ಷಿತ್ ಮುಂಬರುವ ಐಪಿಒಗೆ (Swiggy IPO) ಮುಂಚಿತವಾಗಿ ಆಹಾರ ವಿತರಣಾ ದೈತ್ಯ ಕಂಪನಿಯ ಪ್ರಮುಖ ಹೂಡಿಕೆದಾರರಾಗಿದ್ದಾರೆ. ಮಾಧುರಿ ಮತ್ತು ಇನ್ನೋವ್ 8 ಸಂಸ್ಥಾಪಕ ರಿತೇಶ್ ತಲಾ 1.5 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ.

ಮನಿ ಕಂಟ್ರೋಲ್ ವರದಿಯ ಪ್ರಕಾರ, ಷೇರು ಸ್ವಾಧೀನವನ್ನು ಸೆಕೆಂಡರಿ ಮಾರ್ಕೆಟ್‌ ಮೂಲಕ ಮಾಡಲಾಗಿದೆ. ಇವರಿಬ್ಬರು ತಲಾ 345 ರೂಪಾಯಿಗಳಿಗೆ ಷೇರುಗಳನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಸ್ವಿಗ್ಗಿಯ ಇನ್ವೆಸ್ಟ್‌ ಬ್ಯಾಂಕರ್ ಅವೆಂಡಸ್ ಈ ವಹಿವಾಟನ್ನು ನಡೆಸಿದೆ.

ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮಾಧುರಿ ಅವರ ಪತಿ ಡಾ.ಶ್ರೀರಾಮ್ ನೇನೆ, ಈ ಹೂಡಿಕೆಯನ್ನು ದೃಢೀಕರಿಸಲು ನಿರಾಕರಿಸಿದರು. ಆದಾಗ್ಯೂ ಅವರು ಭಾರತದ ಮಾರುಕಟ್ಟೆಗಳ ವೈಶಿಷ್ಟ್ಯದಿಂದಾಗಿ ಸ್ಟಾರ್ಟ್ಅಪ್ ವ್ಯವಸ್ಥೆಯು ಖಂಡಿತವಾಗಿಯೂ ವಿಶ್ವದ ಅತ್ಯಂತ ಆಸಕ್ತಿಕರ ಎಂದು ಅವರು ಹೇಳಿದ್ದಾರೆ.

ಮಾಧುರಿ ದೀಕ್ಷಿತ್ ಅವರು ಸ್ವಿಗ್ಗಿಯಲ್ಲಿ ಹೂಡಿಕೆ ಮಾಡಿದ ಎರಡನೇ ಸೆಲೆಬ್ರಿಟಿ. ಈ ಹಿಂದೆ ಅಮಿತಾಬ್ ಬಚ್ಚನ್ ಇದೇ ರೀತಿ ಇಲ್ಲಿ ಹೂಡಿಕೆ ಮಾಡಿದ್ದರು. ಸ್ವಿಗ್ಗಿ 1.4 ಬಿಲಿಯನ್ ಡಾಲರ್ (ಸುಮಾರು 11,664 ಕೋಟಿ ರೂ.) ನಿಧಿ ಸಂಗ್ರಹಿಸಲು ಬೃಹತ್ ಐಪಿಒಗೆ ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ.

ಕಂಪನಿಯು ಹಿಂದೆ 3,750 ಕೋಟಿ ರೂ.ಗಳನ್ನು (ಸುಮಾರು 450 ಮಿಲಿಯನ್ ಡಾಲರ್) ಸಂಗ್ರಹಿಸುವ ನಿರೀಕ್ಷೆ ಹೊಂದಿತ್ತ. ಬಳಿಕ ಐಪಿಒ ಗಾತ್ರವನ್ನು ಈಗ 5,000 ಕೋಟಿ ರೂ.ಗೆ (ಸುಮಾರು 600 ಮಿಲಿಯನ್ ಡಾಲರ್) ಹೆಚ್ಚಿಸಲಾಗಿದೆ. ಒಟ್ಟಾರೆಯಾಗಿ, ಸ್ವಿಗ್ಗಿ ಐಪಿಒ ಮೂಲಕ ಸುಮಾರು 1.4 ಬಿಲಿಯನ್ ಡಾಲರ್ ಸಂಗ್ರಹಿಸಲಿದೆ, ಇದು ಈ ಹಿಂದೆ ನಿರೀಕ್ಷಿಸಲಾಗಿದ್ದ 1.25 ಬಿಲಿಯನ್ ಡಾಲರ್‌ಗಿಂತ ಅಧಿಕ.

ಇದನ್ನೂ ಓದಿ: Lata Mangeshkar Birth Anniversary: ಲತಾ ಮಂಗೇಶ್ಕರ್ ಕುರಿತ ಈ ಸಂಗತಿಗಳು ನಿಮಗೆ ಗೊತ್ತೆ?

ಸ್ವಿಗ್ಗಿಯ ಆದಾಯವು 2023ರ ಹಣಕಾಸು ವರ್ಷದಲ್ಲಿ 8,265 ಕೋಟಿ ರೂ.ಗಳಿಂದ 11,247 ಕೋಟಿ ರೂ.ಗೆ ಶೇ.36ರಷ್ಟು ಏರಿಕೆಯಾಗಿದೆ. ವೆಚ್ಚಗಳ ನಿಯಂತ್ರಣಕ್ಕೆ ಸಂಬಂಧಿಸಿದ ಅದರ ನಷ್ಟವು 2023ರ ಹಣಕಾಸು ವರ್ಷದಲ್ಲಿ 4,179 ಕೋಟಿ ರೂ.ಗಳಿಂದ 2024 ರಲ್ಲಿ 2,350 ಕೋಟಿ ರೂ.ಗೆ ಇಳಿಕೆ ಕಂಡಿತ್ತು.