Saturday, 14th December 2024

ಮಧ್ಯಪ್ರದೇಶ ಕಾಂಗ್ರೆಸ್: 39 ನಾಯಕರ ಆರು ವರ್ಷ ಉಚ್ಚಾಟನೆ

ಭೋಪಾಲ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಲು ಮುಂದಾಗಿರುವ ಮಧ್ಯಪ್ರದೇಶದ ಕಾಂಗ್ರೆಸ್ 39 ನಾಯಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಿದೆ.

ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಕಮಲ್ ನಾಥ್ ಅವರ ನಿರ್ದೇಶನದ ಮೇರೆಗೆ ಈ 39 ನಾಯಕರನ್ನು ಕಾಂಗ್ರೆಸ್‍ನಿಂದ ಉಚ್ಚಾಟಿಸಲಾಗಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ರಾಜೀವ್ ಸಿಂಗ್ ತಿಳಿಸಿದ್ದಾರೆ.

ಈ ಉಚ್ಚಾಟಿತ ನಾಯಕರು ಸ್ವತಂತ್ರ ಅಭ್ಯರ್ಥಿಗಳಾಗಿ ಅಥವಾ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ), ಸಮಾಜವಾದಿ ಪಕ್ಷ (ಎಸ್‍ಪಿ) ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ) ಟಿಕೆಟ್‍ನಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಿದೆ.

ಮಾಜಿ ಸಂಸದ ಪ್ರೇಮಚಂದ್ ಗುಡ್ಡು (ಅಲೋಟ್), ಮಾಜಿ ಶಾಸಕ ಅಂತರ್ ಸಿಂಗ್ ದರ್ಬಾರ್ (ಮೊವ್), ಮಾಜಿ ಶಾಸಕ ಯದ್ವೇಂದ್ರ ಸಿಂಗ್ (ನಾಗೋಡ್), ಪಕ್ಷದ ರಾಜ್ಯ ಪಕ್ಷದ ವಕ್ತಾರ ಅಜಯ್ ಸಿಂಗ್ ಯಾದವ್ (ಖರ್ಗಾಪುರ್), ನಾಸಿರ್ ಇಸ್ಲಾಂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 17 ರಂದು ಚುನಾವಣೆ ನಡೆಯಲಿದೆ.