ಮುಂಬೈ: ಮಹಾರಾಷ್ಟ್ರದ ವಿಧಾನಮಂಡಲದ ಬಜೆಟ್ ಅಧಿವೇಶನದಲ್ಲಿ ಆಡಳಿತಾರೂಢ ಪಕ್ಷಗಳ ಸದಸ್ಯರು ಭಾರಿ ಗದ್ದಲ ಮತ್ತು ಕೋಲಾಹಲ ಎಬ್ಬಿಸಿದ ಪರಿಣಾಮ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದರು.
ರಾಜ್ಯಪಾಲ ಕೋಶ್ಯಾರಿ ಆಗಮಿಸುತ್ತಿದ್ದಂತೆ, ಮಹಾವಿಕಾಸ್ ಅಘಾಡಿ ಮೈತ್ರಿ ಸರ್ಕಾರದ ಕಾಂಗ್ರೆಸ್, ಎನ್ ಸಿಪಿ ಮತ್ತು ಶಿವಸೇನಾ ಶಾಸಕರು ಕೋಶ್ಯಾರಿ ಅವರ ವಿರುದ್ಧದ ಘೋಷಣೆಗಳನ್ನು ಮತ್ತು ಛತ್ರಪತಿ ಶಿವಾಜಿ ಮಹಾರಾಜ ಪರ ಜಯ ಘೋಷಣೆಗಳನ್ನು ಕೂಗಿದರು. ಇದರಿಂದ ಬೇಸರಗೊಂಡ ಕೋಶ್ಯಾರಿ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ, ವಿಧಾನಮಂಡಲದಿಂದ ಹೊರ ನಡೆದರು.
ಆಡಳಿತಾರೂಢ ಸದಸ್ಯರು ಶಿವಾಜಿ ಪರ ಘೋಷಣೆ ಕೂಗುತ್ತಿದ್ದರು. ಆದರೆ ಬಿಜೆಪಿ ಶಾಸಕರು ಕೀಳುಮಟ್ಟದ ಘೋಷಣೆಗಳನ್ನು ಕೂಗುತ್ತಿದ್ದರು. ಇದರಿಂದ ಬೇಸತ್ತ ರಾಜ್ಯಪಾಲ ಕೋಶ್ಯಾರಿ ಅವರು ಅಧಿವೇಶನದಿಂದ ನಿರ್ಗಮಿಸಿದರು ಎಂದು ಜಲ ಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ದೂರಿದ್ದಾರೆ.
ಮತ್ತೊಂದೆಡೆ ಬಿಜೆಪಿಯ ಮುಖ್ಯ ಸಚೇತಕ ಆಶಿಷ್ ಶೇಲರ್ ಅವರು ರಾಜ್ಯಪಾಲರ ನಿರ್ಗಮನಕ್ಕೆ ಆಡಳಿತ ಪಕ್ಷದ ಸದಸ್ಯರ ವಿರುದ್ಧ ಆರೋಪ ಮಾಡಿದರು.
ಇತ್ತೀಚೆಗೆ ಔರಂಗಬಾದ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಜ್ಯಪಾಲ ಕೋಶ್ಯಾರಿ ಅವರು, ಶಿವಾಜಿ ಮಹಾರಾಜ ಅವರ ಗುರುವಾಗಿರುವ ಸಮರ್ಥ ರಾಮದಾಸ್ ಅವರು ಇಲ್ಲದಿದ್ದರೆ, ಶಿವಾಜಿ ಅವರನ್ನು ಯಾರು ಕೇಳುತ್ತಿದ್ದರು ಎಂದು ಹೇಳಿದ್ದರು.