Saturday, 16th November 2024

Maharashtra Assembly Elections: ʼಮಹಾವಿಕಾಸ ಅಘಾಡಿಗೆ ಮತ ಚಲಾಯಿಸಿ 3 ಸಾವಿರ ರೂ. ಪಡೆಯಿರಿ! ನಟಿಗೆ ಬಂತು ಕಾಲ್!

‌ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಯ (Maharashtra Assembly Elections) ಕಾವು ಜೋರಾಗಿದೆ. ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ಎಲ್ಲೆಡೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ನಾಯಕರ ಮಧ್ಯೆ ವಾಕ್‌ ಸಮರ, ಆರೋಪ ಪ್ರತ್ಯಾರೋಪಗಳೂ ಜೋರಾಗಿ ನಡೆಯುತ್ತಿದೆ. ಈ ನಡುವೆ ಬಾಲಿವುಡ್‌ ನಟಿ ಸುಚಿತ್ರಾ ಕೃಷ್ಣಮೂರ್ತಿ (Suchitra Krishnamoorthi) ಹೊಸ ಬಾಂಬ್‌ ಒಂದನ್ನು ಸಿಡಿಸಿದ್ದು, ಮಹಾ ವಿಕಾಸ ಅಘಾಡಿ (Maha Vikas Aghadi) ಮೈತ್ರಿ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಮತ್ತು ಅದಕ್ಕೆ ಪ್ರತಿಯಾಗಿ ಹಣ ನೀಡುವ ಆಮಿಷದ ಕರೆ ಬಂದಿದೆ ಎಂದು ಹೇಳಿರುವುದು ಮಹಾ ಚುನಾವಣಾ ರಾಜಕೀಯದಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ. ಇದಕ್ಕೆ ನೆಟ್ಟಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದು, ಕೆಲವರು ಈ ಕರೆಯ ಸಾಚಾತನವನ್ನೇ ಪ್ರಶ್ನಿಸಿದ್ದಾರೆ.

ಮಹಾವಿಕಾಸ ಅಘಾಡಿಯ ಅಭ್ಯರ್ಥಿಗೆ ಮತ ಚಲಾಯಿಸಿದಲ್ಲಿ ಮೂರು ಸಾವಿರ ರೂಪಾಯಿಗಳನ್ನು ನೀಡುವುದಾಗಿ ತನಗೆ ಬಂದ ರೆಕಾರ್ಡ್ ಕರೆ ಮೂಲಕ ಆಮಿಷ ಒಡ್ಡಿಡ್ಡಲಾಗಿದೆ ಎಂದು ಸುಚಿತ್ರಾ ಹೇಳಿಕೊಂಡಿದ್ದಾರೆ. ಸುಚಿತ್ರಾ ಅವರು ಈ ಮಾಹಿತಿಯನ್ನು ತನ್ನ ಅಧಿಕೃತ ʼಎಕ್ಸ್‌ʼ (X) ಖಾತೆಯಲ್ಲಿ ಬಹಿರಂಗಪಡಿಸುತ್ತಿದ್ದಂತೆ, ಈ ವಿಷಯನ್ನು ತಕ್ಷಣವೇ ಚುನಾವಣಾ ಆಯೋಗದ ಗಮನಕ್ಕೆ ತರುವಂತೆ ಸಲಹೆ ನೀಡಿದ್ದಾರೆ.

ʼಇದು ನಕಲಿ ಕರೆಯೂ ಆಗಿರುವ ಸಾಧ್ಯತೆಯಿದೆ, ಆ ಮೂಲಕ ಅಕೌಂಟ್‌ ಮಾಹಿತಿಯನ್ನು ಪಡೆದುಕೊಳ್ಳಲು ಖದೀಮರು ಪ್ರಯತ್ನಿಸಿರುವ ಸಾಧ್ಯತೆಗಳಿವೆʼ ಎಂದು ಒಬ್ಬ ಎಕ್ಸ್‌ ಬಳಕೆದಾರರು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʼಕ್ಯಾಶ್‌ ಅಥವಾ ಡಿಜಿಟಲ್‌ ಪೇಮೆಂಟ್..?‌ʼ ಎಂದು ತಮಾಷೆಯಾಗಿ ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಗೆ ನ.20ರಂದು ಚುನಾವಣೆ ನಡೆಯಲಿದ್ದು ಇಲ್ಲಿ ಒಟ್ಟು 288 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಮತಗಳ ಎಣಿಕೆ ನ.23ಕ್ಕೆ ನಡೆಯಲಿದೆ. ಕಾಂಗ್ರೆಸ್‌, ನ್ಯಾನಲಿಸ್ಟ್‌ ಕಾಂಗ್ರೆಸ್‌ ಪಕ್ಷ (ಶರದ್‌ ಪವಾರ್‌ ಬಣ) ಮತ್ತು ಶಿವಸೇನಾ (ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ ಬಣ) ಸೇರಿಕೊಂಡು ಮಹಾವಿಕಾಸ ಅಘಾಡಿ ಮೈತ್ರಿಕೂಟವನ್ನು ರಚಿಸಿಕೊಂಡಿವೆ.

ಇದನ್ನೂ ಓದಿ: Congress Guarantee: ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಹೇರಲು ತುದಿಗಾಲಲ್ಲಿ ನಿಂತ ಸಿಎಂ: ಛಲವಾದಿ ನಾರಾಯಣಸ್ವಾಮಿ ಟೀಕೆ

ಇನ್ನೊಂದೆಡೆ ಬಿಜೆಪಿ, ಎನ್.ಸಿ.ಪಿ. (ಅಜಿತ್‌ ಪವಾರ್‌ ಬಣ) ಮತ್ತು ಶಿವಸೇನೆ (ಶಿಂಧೆ ಬಣ) ಮಹಾಯುತು ಮೈತ್ರಿಕೂಟದ ಮೂಲಕ ಈ ಚುನಾವಣೆಗೆ ಸೆಣೆಸುತ್ತಿವೆ.

ಸುಚಿತ್ರಾ ಅವರು 2022ರಲ್ಲಿ ಕೊನೆಯ ಬಾರಿ ಅಮೆಜಾನ್‌ ಪ್ರೈಮ್‌ ವಿಡಿಯೋ ಶೋ ಗಿಲ್ಟಿ ಮೈಂಡ್ಸ್‌ ನಲ್ಲಿ ನಟಿಸಿದ್ದರು. ನಟಿ ಈ ಹಿಂದೆಯೂ ಹಲವು ಬಾರಿ ರಾಜ್ಯ ಮತ್ತು ರಾಷ್ಟ್ರ ರಾಜಕಾರಣ ವಿಚಾರದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ಸುದ್ದಿಯಾಗಿದ್ದರು.

ಈ ಹಿಂದೆ ಅಕ್ಟೋಬರ್‌ ನಲ್ಲಿ ಎನ್.ಸಿ.ಪಿ. ನಾಯಕ ಬಾಬಾ ಸಿದ್ದಿಕಿ ಹತ್ಯೆಯ ಬಳಿಕ ಮುಂಬೈನಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನಿಸುವ ಮೂಲಕ ಸುದ್ದಿಯಾಗಿದ್ದರು. ʼಹೆಚ್ಚುತ್ತಿರುವ ಕೊಲೆ ಮತ್ತು ಅಪಹರಣ ಪ್ರಕರಣಗಳು ನಿಜವಾಗಿಯೂ ಆತಂಕಕಾರಿ, ಹಾಗೂ ನಮ್ಮ ಜೀವನದಲ್ಲಿ ʼನೈತಿಕತೆʼ ಮತ್ತು ʼಸಂಸ್ಕಾರʼ ಮೂಡಿಬರಬೇಕಾಗಿದೆʼ ಎಂದು ಸುಚಿತ್ರಾ ಅವರು ಕಮೆಂಟ್‌ ಮಾಡಿದ್ದರು.