Thursday, 12th December 2024

ಮಹಾರಾಷ್ಟ್ರ ಬಂದ್ ಯಶಸ್ವಿ

ಮುಂಬೈ: ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ನಾಲ್ವರು ರೈತರ ಹತ್ಯೆ ಖಂಡಿಸಿ ಕರೆ ನೀಡಲಾಗಿದ್ದ ಮಹಾರಾಷ್ಟ್ರ ಬಂದ್ ಯಶಸ್ವಿ ಯಾಗಿದೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿರುವ ಮಹಾ ವಿಕಾಶ್ ಅಘಾಡಿ ಕರೆ ಕೊಟ್ಟಿ ಬಂದ್‍ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸಂಪೂರ್ಣ ಸ್ಥಬ್ದಗೊಂಡಿತ್ತು. ಅಂಗಡಿ ಮುಗ್ಗಟ್ಟು ಗಳನ್ನು ಮುಚ್ಚಲಾಗಿತ್ತು. ಬಸ್ ಸೇವೆ ಸ್ಥಗಿತಗೊಂಡಿತ್ತು.

ಕೈಗಾರಿಕೆಗಳು, ವಾಣಿಜ್ಯ ಮಳಿಗೆಗಳಿಗೆ ರಜೆ ಘೋಷಿಸಲಾಗಿತ್ತು. ಜತೆಗೆ ಬೃಹನ್ಮುಂಬಯಿ ಎಲೆಕ್ಟ್ರಿಕ್ ಸರಬರಾಜು ಮತ್ತು ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತ ಗೊಂಡಿತ್ತು. ಸಬರ್ಬನ್ ರೈಲಿನಲ್ಲಿ ಪ್ರಯಾಣ ಬೆಳೆಸಲು ಪ್ರಯಾಣಿಕರು ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಟ್ಯಾಕ್ಸಿ ಮತ್ತು ಕ್ಯಾಬ್ ಸೇವೆ ಸ್ಥಗಿತಗೊಂಡಿರುವುದರಿಂದ ಮುಂಬೈ ಹೊರವಲಯದಲ್ಲಿರುವ ವಿಮಾನ ನಿಲ್ದಾಣಕ್ಕೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ನಾವು ಬಸ್ ಸೇವೆಯನ್ನು ಸ್ಥಗಿತಗೊಳಿಸಿಲ್ಲ. ಆದರೆ, ಪರಿಸ್ಥಿತಿ ಅವಲೋಕಿಸಿಕೊಂಡು ಬಸ್ ಸಂಚಾರ ಆರಂಭಿಸಲು ಆಯಾ ಜಿಲ್ಲೆ ಗಳ ಅಧಿಕಾರಿಗಳಿಗೆ ಅವಕಾಶ ನೀಡಲಾಗಿದೆ ಎಂದು ಎಂಎಸ್‍ಆರ್‍ಟಿಸಿ ತಿಳಿಸಿದೆ. ಒಟ್ಟಾರೆ, ಇಂದು ಕರೆ ನೀಡಲಾಗಿರುವ ಮಹಾರಾಷ್ಟ್ರ ಬಂದ್‍ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಕಂಡುಬಂತು.