Thursday, 12th December 2024

ಮಹಾರಾಷ್ಟ್ರ ಸಚಿವ ಸಂಪುಟ ರಚನೆಗೆ ಕ್ಷಣಗಣನೆ…

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಚಿವ ಸಂಪುಟವನ್ನು ಮಂಗಳವಾರ ವಿಸ್ತರಿಸಲಿದ್ದಾರೆ.

ಆ.10 ರಿಂದ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನ ಪ್ರಾರಂಭವಾಗ ಲಿದೆ. ರಾಜ್ಯದ ಸಂಪುಟದಲ್ಲಿ ಸುಮಾರು 18 ಸಚಿವರು ಸೇರ್ಪಡೆಗೊಳ್ಳುವ ನಿರೀಕ್ಷೆಯಿದ್ದು, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ನಿರ್ಣಾ ಯಕ ಗೃಹ ಖಾತೆಯನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.

ಶಿವಸೇನೆಯಲ್ಲಿನ ಬಂಡಾಯದಿಂದಾಗಿ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ನಂತರ ಬಂಡಾಯ ಹೂಡಿದ್ದ ಏಕನಾಥ್ ಶಿಂಧೆ ಮತ್ತು ಬಿಜೆಪಿಯ ದೇವೇಂದ್ರ ಫಡ್ನವಿಸ್ ಕ್ರಮವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಜೂನ್ 30 ರಂದು ಪ್ರಮಾಣವಚನ ಸ್ವೀಕರಿಸಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂಧೆ ಅವರು ಬಹು ನಿರೀಕ್ಷಿತ ಸಂಪುಟ ವಿಸ್ತರಣೆಗೆ ಮುನ್ನ ತಮ್ಮ ಪಕ್ಷದ ನಾಯಕರೊಂದಿಗೆ ಮುಂಬೈನ ಸಹ್ಯಾದ್ರಿ ಅತಿಥಿ ಗೃಹದಲ್ಲಿ ಸಭೆ ನಡೆಸುತ್ತಿದ್ದಾರೆ. ಈ ಸಭೆಗೂ ಮುನ್ನ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ನಿವಾಸದಲ್ಲಿ ಸಭೆ ನಡೆದಿತ್ತು.

ಏಕನಾಥ್ ಶಿಂಧೆ ಸಂಪುಟದಲ್ಲಿ ಬಿಜೆಪಿಯಿಂದ ರಾಧಾಕೃಷ್ಣ ವಿಖೆ ಪಾಟೀಲ್, ಚಂದ್ರ ಕಾಂತ್ ಪಾಟೀಲ್, ಗಿರೀಶ್ ಮಹಾಜನ್, ಸುಧೀರ್ ಮುಂಗಂತಿವಾರ್ ಮತ್ತು ಶಿಂಧೆ ಗುಂಪಿನಿಂದ ಉದಯ್ ಸಮಂತ್, ದಾದಾ ಭೂಸೆ, ಸಂದೀಪನ್ ಬುಮ್ರೆ, ಸಂಜಯ್ ಶಿರ್ಸತ್ ಮತ್ತು ಗುಲಾಬ್ರಾವ್ ಪಾಟೀಲ್ ಸೇರುವ ಸಾಧ್ಯತೆಯಿದೆ.

ಉದಯ್ ಸಾಮಂತ್, ಸಂದೀಪನ್ ಬುಮ್ರೆ, ಗುಲಾಬ್ರಾವ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಸೇರಿದಂತೆ ಮಾಜಿ ಸಚಿವರೂ ಏಕನಾಥ್ ಶಿಂಧೆ ನೇತೃತ್ವದ ಹೊಸ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ.

ಏಕನಾಥ್ ಶಿಂಧೆ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ 41 ದಿನಗಳ ನಂತರ ಇಂದು ಸಚಿವ ಸಂಪುಟವನ್ನು ವಿಸ್ತರಿಸಲಿದ್ದಾರೆ.