Thursday, 5th December 2024

Maharashtra CM: ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಮಹಾಯುತಿ- ಫಡ್ನವೀಸ್‌ಗೆ ಫುಲ್‌ ಸಪೋರ್ಟ್‌ ಎಂದ ಶಿಂಧೆ

Maharashtra Government

ಮುಂಬೈ: ಕುತೂಹಲ ಮೂಡಿಸಿದ್ದ ಮಹಾ ಗದ್ದುಗೆಯ ಗುದ್ದಾಟಕ್ಕೆ ಬುಧವಾರ ಬೆಳಗ್ಗೆ ತೆರೆ ಬಿದ್ದಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಬಿಜೆಪಿಯ ಕೇಂದ್ರ ಪರಿವೀಕ್ಷಕ ವಿಜಯ್‌ ರೂಪಾನಿ ನೇತೃತ್ವದ ಕೋರ್‌ ಕಮಿಟಿ ದೇವೇಂದ್ರ ಫಡ್ನವೀಸ್‌ (Maharashtra CM)ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಘೋಷಿಸಿದೆ. ಅದರ ಬೆನ್ನಲ್ಲೇ  ದೇವೇಂದ್ರ ಫಡ್ನವಿಸ್, (Devendra Fadnavis) ಶಿವಸೇನೆ ನಾಯಕ ಏಕನಾಥ್ ಶಿಂಧೆ (Eknath Shindhe) ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP) ಅಜಿತ್ ಪವಾರ್ (Ajit Pawar) ಅವರು ಬುಧವಾರ ಮಧ್ಯಾಹ್ನ ಮುಂಬೈನ ರಾಜಭವನದಲ್ಲಿ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. (Maharashtra Government)

ರಾಜ್ಯಪಾಲರ ಭೇಟಿಯ ನಂತರ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಫಡ್ನವೀಸ್‌ ಅವರು ಅಜಿತ್‌ ಪವಾರ್‌ ಹಾಗೂ ಶಿಂಧೆಗೆ ಧನ್ಯವಾದ ತಿಳಿಸಿದರು. ನಂತರ ಅಜಿತ್‌ ಪವಾರ್‌ರನ್ನು ಉಪಮುಖ್ಯಮಂತ್ರಿ ಎಂದು ಘೋಷಣೆ ಮಾಡಲಾಯಿತು.

ಮೈತ್ರಿಕೂಟದ ಬಗ್ಗೆ ಮಾತನಾಡಿ ಪವಾರ್‌ ಹಾಗೂ ಶಿಂಧೆ ಇಬ್ಬರೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ನನ್ನ ಹೆಸರನ್ನು ಶಿಫಾರಸ್ಸು ಮಾಡಿದ್ದರು ಎಂದು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮತ್ತೊಂದು ಅಚ್ಚರಿ ಎಂಬಂತೆ ಏಕನಾಥ ಶಿಂಧೆಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಬೇಕು ಎಂದು ಕೋರಿಕೆಯನ್ನಿಟ್ಟಿದ್ದಾರೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಎರಡು ಡಿಸಿಎಂ ಹುದ್ದೆ ಸೃಷ್ಟಿಯಾಗುವುದು ಬಹುತೇಕ ಖಚಿತಗೊಂಡಿದೆ.

ನಂತರ ಮಾತನಾಡಿದ ಅಜಿತ್‌ ಪವಾರ್‌ ಬಿಜೆಪಿಯ ವರಿಷ್ಠರನ್ನು ಭೇಟಿಯಾದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ತಾನು ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ದೆಹಲಿಗೆ ಹೋಗಿಲ್ಲ ಎಂದು ಹೇಳಿದ್ದಾರೆ. ತಮ್ಮ ಪತ್ನಿ ರಾಜ್ಯಸಭಾ ಸದಸ್ಯೆಯಾಗಿದ್ದರಿಂದ ಅವರಿಗೆ ಮನೆ ಮಂಜೂರು ಮಾಡಿದ್ದರಿಂದ ಮತ್ತು ಎನ್‌ಸಿಪಿ ಚಿಹ್ನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರನ್ನು ಭೇಟಿಯಾಗಬೇಕಿದ್ದ ಕಾರಣ ಅಲ್ಲಿಗೆ ಹೋಗಿದ್ದೆ ಎಂದು ಹೇಳಿದರು.

ಶಿಂಧೆ ಹೇಳಿದ್ದೇನು?

ಏಕನಾಥ ಶಿಂಧೆ ಮಾತನಾಡಿ ಫಡ್ನವಿಸ್ ಒಬ್ಬ ಅನುಭವಿ ನಾಯಕ ಮತ್ತು ಅವರ ಪ್ರಯತ್ನಗಳಿಗೆ ನಾನು ಬೆಂಬಲ ನೀಡುತ್ತೇನೆ. ಅವರಿಗೆ ನನ್ನ ಕಡೆಯಿಂದ ಶುಭ ಹಾರೈಸುತ್ತೇನೆ ಎಂದು ಹೇಳಿದರು. ಪವಾರ್‌ ಬಗ್ಗೆ ಮಾತನಾಡಿದ ಅವರು, ಅಜಿತ್ ಪವಾರ್ ಕೂಡ ಅನುಭವಿ ವ್ಯಕ್ತಿಯಾಗಿದ್ದು, ಅವರಲ್ಲಿ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಗುರವಾರ ಸಂಜೆ ಪದಗ್ರಹಣ ಕಾರ್ಯಕ್ರಮ ನಡೆಯುತ್ತಿದ್ದು, ಮುಂಬೈನ ಅಜಾದ್‌ ಮೈದಾನದಲ್ಲಿ ಸಿದ್ಧತೆ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ , ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಈ ಸುದ್ದಿಯನ್ನೂ ಓದಿ : Devendra Fadnavis: ʻಮಹಾʼ ಗದ್ದುಗೆ ಫಡ್ನವೀಸ್‌ಗೆ ಫಿಕ್ಸ್‌; ಶಿಂಧೆ, ಪವಾರ್‌ ಜತೆ ಮಹತ್ವದ ಸಭೆ, ಸೀಟು ಹಂಚಿಕೆ ಬಗ್ಗೆ ಚರ್ಚೆ