ಮುಂಬೈ: ಮಹಾರಾಷ್ಟ್ರದ (Maharashtra) ಮಹಾಯುತಿ ಸರ್ಕಾರದ ಮುಖ್ಯಸ್ಥ ದೇವೇಂದ್ರ ಫಡಣವೀಸ್ ಅವರು ಗುರುವಾರ ಸಂಜೆ 5 ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರೊಂದಿಗೆ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಇದರ ಜೊತೆಗೆ ಹಲವು ಸಚಿವರು ಪ್ರಮಾಣ ವಚನ ಸ್ವೀಕರಿಸಬಹುದು. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿಬಿಜೆಪಿ ಭಾರೀ ಸಿದ್ಧತೆ ನಡೆಸಿದೆ.
ಬಿಜೆಪಿ, ಶಿವಸೇನೆ ಶಿಂಧೆ ಬಣ ಮತ್ತು ಎನ್‌ಸಿಪಿ ಅಜಿತ್ ಪವಾರ್ ಬಣದ 30-35 ಸಚಿವರು ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ನಡೆಯಲಿರುವ ಪ್ರಮಾಣ ವಚನ ಸಮಾರಂಭದಲ್ಲಿ ದೇಶದ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಮೂರು ಪಕ್ಷಗಳ 40 ಸಾವಿರ ಕಾರ್ಯಕರ್ತರು-ಅಧಿಕಾರಿಗಳು, ಸಂತರು, ಋಷಿಮುನಿಗಳು ಸೇರಿದಂತೆ 2,000 ವಿಶೇಷ ವ್ಯಕ್ತಿಗಳು ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಬುಧವಾರ ವಿಧಾನ ಭವನದಲ್ಲಿ ಬಿಜೆಪಿ ಕೋರ್ ಟೀಮ್ ಸಭೆ ನಡೆಯಿತು. ವಿಜಯ್ ರೂಪಾನಿ ಹಾಗೂ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಮ್ಮುಖದಲ್ಲಿ ಸೆಂಟ್ರಲ್ ಹಾಲ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಸಭೆಯಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಚಂದ್ರಕಾಂತ್ ಪಾಟೀಲ್ ಮತ್ತು ಸುಧೀರ್ ಮುಂಗಂತಿವಾರ್ ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಫಡ್ನವೀಸ್ ಹೆಸರನ್ನು ಪ್ರಸ್ತಾಪಿಸಿದರು, ಅದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, “ರಾಜ್ಯ ಮತ್ತು ಕೇಂದ್ರದಲ್ಲಿ ಡಬಲ್ ಇಂಜಿನ್ ಸರ್ಕಾರ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ. ಮಹಾರಾಷ್ಟ್ರವನ್ನು ಶಕ್ತಿಶಾಲಿ ರಾಜ್ಯವನ್ನಾಗಿ ಮಾಡುವಂತೆ ಶಾಸಕರಿಗೆ ಕರೆ ನೀಡಿದರು. ನಾವು ಒಗ್ಗಟ್ಟಾಗಿದ್ದರೆ ನಾವು ಸುರಕ್ಷಿತವಾಗಿರುತ್ತೇವೆ,” ಎಂದು ಹೇಳಿದರು. ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಫಡ್ನವೀಸ್, “ಒಗ್ಗಟ್ಟಾಗಿದ್ದರೆ ನಾವು ಸುರಕ್ಷಿತವಾಗಿರುತ್ತೇವೆ ಎಂಬ ಪ್ರಧಾನಿ ಮೋದಿಯವರು ಮಂತ್ರದಿಂದ ನಾವು ಗೆದ್ದಿದ್ದೇವೆ,” ಎಂದು ತಿಳಿಸಿದ್ದಾರೆ.
ಏಕನಾಥ್ ಶಿಂಧೆ ಉಪ ಮುಖ್ಯಮಂತ್ರಿಯಾಗುವ ಬಗ್ಗೆ ಖಚಿತತೆ ಇಲ್ಲ
ಆಜಾದ್ ಮೈದಾನದಲ್ಲಿ ಫಡ್ನವಿಸ್ ಜೊತೆಗೆ ಎಷ್ಟು ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಬಹುದು. ಇದಲ್ಲದೇ ಇನ್ನು ಯಾರು ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬ ಬಗ್ಗೆ ತೀವ್ರ ಕುತೂಹಲವಿದೆ. ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತ. ಆದರೆ, ಉಪ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಪ್ರಮಾಣ ವಚನ ಸ್ವೀಕರಿಸುವ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲ.
ಶಿಂಧೆ ಸಂಪುಟ ಸೇರಬೇಕು: ಫಡಣವೀಸ್
ಪತ್ರಿಕಾಗೋಷ್ಠಿಯಲ್ಲಿ ದೇವೇಂದ್ರ ಫಡ್ನವೀಸ್ ಮಾತನಾಡಿ, “ಶಿವಸೇನೆಯ ಪರವಾಗಿ ಏಕನಾಥ್ ಶಿಂಧೆ ಅವರನ್ನು ಸಂಪುಟಕ್ಕೆ ಸೇರುವಂತೆ ಮನವಿ ಮಾಡಿದ್ದೇವೆ. ನಮಗೆ ಸಕಾರಾತ್ಮಕ ಸ್ಪಂದನೆ ಸಿಗಲಿದೆ ಎಂದು ನನಗೆ ಖಾತ್ರಿಯಿದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ನಾವು ಮೂವರು ಮತ್ತು ನಮ್ಮ ಪಕ್ಷದ ಇತರ ನಾಯಕರು ಮತ್ತು ಮಿತ್ರಪಕ್ಷಗಳು ಒಟ್ಟಾಗಿ ಮಹಾರಾಷ್ಟ್ರಕ್ಕೆ ಉತ್ತಮ ಸರ್ಕಾರ ನೀಡಲು ಪ್ರಯತ್ನಿಸುತ್ತೇವೆ,” ಎಂದು ತಿಳಿಸಿದ್ದಾರೆ.