ಮುಂಬೈ : ಮಹಾರಾಷ್ಟ್ರದಲ್ಲಿ ಕೊನೆ ಹಂತದ ಪ್ರಚಾರ ಕಾರ್ಯನಡೆಯುತ್ತಿದೆ. ಬುಧವಾರ ವಿಧಾನಸಭಾ ಚುನಾವಣೆ (Maharashtra Election) ಇರುವುದರಿಂದ ಸೋಮವಾರ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಮತದಾನಕ್ಕೆ ಇನ್ನು ಕೆಲವೇ ಗಂಟೆಗಳಲ್ಲಿ ಮತದಾನ (Voting) ಪ್ರಕ್ರಿಯೆ ಶುರುವಾಗಲಿದ್ದು, ಬಿಜೆಪಿ (BJP) ನಾಯಕರೊಬ್ಬರು ಹಣ ಹಂಚುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಪಾಲ್ಘರ್ ಜಿಲ್ಲೆಯ ವಿರಾರ್ನಲ್ಲಿರುವ ಹೋಟೆಲ್ನ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ವಿನೋದ್ ತಾವ್ಡೆ ಸೇರಿದಂತೆ ಇತರ ಬಿಜೆಪಿ ನಾಯಕರು ಹಣ ಹಂಚುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ.
ನಲಸೋಪರದ ಬಿಜೆಪಿ ಅಭ್ಯರ್ಥಿ ರಾಜನ್ ನಾಯ್ಕ್ ಮತದಾರರ ಮೇಲೆ ಪ್ರಭಾವ ಬೀರಲು ತಾವಡೆ ಅವರ ಸಮ್ಮುಖದಲ್ಲಿ ನಗದು ಹಂಚುತ್ತಿದ್ದಾರೆ ಎಂದು ಬಹುಜನ ವಿಕಾಸ್ ಆಗಾಡಿ ಪಕ್ಷ ಆರೋಪಿಸಿದೆ. ಹಾಲಿ ಶಾಸಕರಾದ ಕ್ಷಿತಿಜ್ ಠಾಕೂರ್ ಅವರು ತಮ್ಮ ಬೆಂಬಲಿಗರೊಂದಿಗೆ ಹೋಟೆಲ್ಗೆ ತಲುಪಿದರು ಮತ್ತು ಹೈ ಡ್ರಾಮಾ ನಡೆಯಿತು.
ಬಹುಜನ ವಿಕಾಸ್ ಆಗಾಡಿ ಪಕ್ಷದ ಬೆಂಬಲಿಗರು ತಾವ್ಡೆ ಅವರ ವಿರುದ್ಧ “ಚೋರ್ ಹೇ” ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಸಭೆ ನಡೆಯುವ ಸ್ಥಳದಲ್ಲಿ ನಗದು ಮತ್ತು ಡೈರಿಗಳಿರುವ ಲಕೋಟೆಗಳು ಸಿಕ್ಕಿವೆ ಎಂದು ಅವರು ಹೇಳಿದ್ದಾರೆ ಹಾಗೂ ಅವರು ತಾವ್ಡೆ ಅವರ ಮುಂದೆ ನೋಟುಗಳನ್ನು ತೋರಿಸಿ ಏನು ಮಾಡುತ್ತಿದ್ದೀರಿ ಎಂದು ಕೇಳುವ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಕಾಂಗ್ರೆಸ್ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು, ಬಿಜೆಪಿ ಹಣಬಲ ಬಳಸಿ ಚುನಾವಣೆಯಲ್ಲಿ ಪ್ರಭಾವ ಬೀರುತ್ತಿದೆ ಎಂದು ಆರೋಪಿಸಿದೆ. ಇದರಲ್ಲಿ ಉನ್ನತ ಮಟ್ಟದ ನಾಯಕರು ಭಾಗಿಯಾಗಿದ್ದಾರೆ. ಚುನಾವಣಾ ಆಯೋಗ ಈ ಕುರಿತು ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.
BJP के राष्ट्रीय महासचिव विनोद तावड़े महाराष्ट्र के एक होटल में पैसे बांटते हुए पकड़े गए हैं।
— Congress (@INCIndia) November 19, 2024
विनोद तावड़े बैग में भरकर पैसे लेकर गए थे और वहां पर लोगों को बुला-बुलाकर पैसे बांट रहे थे।
ये खबर जब जनता को पता चली तो भारी हंगामा हो गया। पैसों के साथ विनोद तावड़े के कई वीडियो… pic.twitter.com/iqbMcGJtyQ
ಈ ಘಟನೆಯ ಬಗ್ಗೆ ಮಾತನಾಡಿದ ಬಹುಜನ ವಿಕಾಸ್ ಆಗಾಡಿ ಪಕ್ಷದ ಅಧ್ಯಕ್ಷ ಹಿತೇಂದ್ರ ಠಾಕೂರ್, ವಿರಾರ್ ಹೋಟೆಲ್ ನಲ್ಲಿ ₹ 5 ಕೋಟಿ ಹಂಚಲಾಗಿದೆ. ಹಣದ ಬಗೆಗಿನ ವಿವರಗಳನ್ನು ಹೊಂದಿರುವ ಡೈರಿ ತಾವ್ಡೆ ಬಳಿ ಇದೆ ಎಂದು ಆರೋಪಿಸಿದ್ದಾರೆ. ಶರದ್ ಪವಾರ್ ನೇತೃತ್ವದ ಎನ್ಸಿಪಿ ನಾಯಕಿ ಸುಪ್ರಿಯಾ ಸುಳೆ ಮಾತನಾಡಿ ನೋಟು ಅಮಾನ್ಯೀಕರಣವನ್ನು ಅವರೇ ಪರಿಚಯಿಸಿದ್ದು, ಹಾಗಾದರೆ ಇಷ್ಟೊಂದು ಹಣ ಎಲ್ಲಿಂದ ಬಂತು? ವಿನೋದ್ ತಾವ್ಡೆ ಅವರಂತಹ ಹಿರಿಯ ನಾಯಕರು ಇದರಲ್ಲಿ ಭಾಗಿಯಾಗಿರುವುದು ನನಗೆ ಆಶ್ಚರ್ಯ ತಂದಿದೆ ಎಂದು ಹೇಳಿದ್ದಾರೆ.
ಶಿವಸೇನಾ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ಉದ್ಧವ್ ಠಾಕ್ರೆಯ ಬ್ಯಾಗನ್ನು ಅಷ್ಟು ಬಾರಿ ಪರಿಶೀಲನೆ ಮಾಡಲಾಗಿದೆ. ಆದರೆ ನಿಜವಾದ ಕಳ್ಳರನ್ನು ಸುಮ್ಮನೇ ಬಿಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Maharashtra Election: ಮಹಾರಾಷ್ಟ್ರ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ
ವಿಪಕ್ಷಗಳ ಟೀಕೆಗಳಿಗೆ ಉತ್ತರಿಸಿದ ಬಿಜೆಪಿ, ಆಧಾರ ರಹಿತ ಆರೋಪ ಎಂದು ಟೀಕಿಸಿದೆ. ಚುನಾವಣೆಯ ಮುನ್ನಾದಿನದಂದು ಬಹುಜನ ವಿಕಾಸ್ ಅಘಾಡಿಯ ರಾಜಕೀಯ ಸ್ಟಂಟ್ ಎಂದು ತಿರುಗೇಟು ಕೊಟ್ಟಿದೆ. ಚುನಾವಣಾ ಸಿದ್ಧತೆಗಳ ಕುರಿತು ಚರ್ಚಿಸಲು ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಲು ತಾವ್ಡೆ ಹೋಟೆಲ್ಗೆ ಬಂದಿದ್ದರು ಎಂದು ಪಕ್ಷ ಹೇಳಿದೆ. ಚುನಾವಣಾ ಆಯೋಗವು ಈ ಬಗ್ಗೆ ತನಿಖೆ ನಡೆಸಬೇಕು ಮತ್ತು ವಿಷಯದ ಮೂಲವನ್ನು ಪಡೆಯಲು ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಬೇಕು ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.