ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ (Maharashtra Election)ಗೆ ಎನ್‌ಸಿಪಿ (ಎಸ್‌ಪಿ) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಲ್ಲಿ 45 ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ. ಉಪ ಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರನ್ನು ಸೋಲಿಸಲು ಶರದ್ ಪವಾರ್ ತಮ್ಮ ಮೊಮ್ಮಗನನ್ನು ಕಣಕ್ಕಿಳಿಸಿದ್ದಾರೆ. ಬಾರಾಮತಿ (Baramati)ಯಲ್ಲಿ ಪಕ್ಷದ ಎರಡು ಬಣಗಳ ನಡುವೆ ಮತ್ತೊಂದು ಸುತ್ತಿನ ಕದನ ನಡೆಯಲಿದ್ದು, ಅಜಿತ್ ಪವಾರ್ ವಿರುದ್ಧ ಶರದ್ ಪವಾರ್ ಅವರ ಮೊಮ್ಮಗ ಯುಗೇಂದ್ರ ಪವಾರ್ (Yugendra Pawar) ಸ್ಪರ್ಧಿಸಲಿದ್ದಾರೆ. ಹೀಗಾಗಿ ಈ ಕ್ಷೇತ್ರ ಇದೀಗ ದೇಶದ ಗಮನ ಸೆಳೆದಿದೆ.
ವಿಶೇಷ ಎಂದರೆ ಯುಗೇಂದ್ರ ಅವರು ಅಜಿತ್ ಪವಾರ್ ಅವರ ಸಹೋದರ ಶ್ರೀನಿವಾಸ್ ಅವರ ಪುತ್ರ. ಕಳೆದ ವರ್ಷ ಜುಲೈನಲ್ಲಿ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಶರದ್ ಪವಾರ್ ಅವರ ನಾಯಕತ್ವದ ಬಗ್ಗೆ ಅಸಮಾಧಾನಗೊಂಡು ಬಹುಪಾಲು ಶಾಸಕರೊಂದಿಗೆ ಹೊರನಡೆದು ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ-ಶಿವಸೇನೆ ಸರ್ಕಾರದ ಭಾಗವಾಗಿದ್ದರು. ಇದೀಗ ಎನ್‌ಸಿಪಿಯಲ್ಲಿ ಅಜಿತ್ ಪವಾರ್ ಮತ್ತು ಶರದ್ ಪವಾರ್ ಬಣಗಳಿವೆ. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಆಡಳಿತ ರೂಢ ಮಹಾಯುತಿ ಮೈತ್ರಿಕೂಟದ ಭಾಗವಾಗಿದ್ದರೆ, ಶರದ್ ಪವಾರ್ ಬಣ ವಿಪಕ್ಷ ಮಹಾ ವಿಕಾಸ್ ಅಘಾಡಿಯ ಮಿತ್ರ ಪಕ್ಷವಾಗಿ ಗುರುತಿಸಿಕೊಂಡಿದೆ. ಮಹಾ ವಿಕಾಸ್ ಅಘಾಡಿಯ ಮೈತ್ರಿ ಪಕ್ಷಗಳಾದ ಶಿವಸೇನೆ (ಯುಬಿಟಿ), ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ಎನ್‌ಸಿಪಿ ಈ ಬಾರಿ ತಲಾ 85 ಸೀಟುಗಳಲ್ಲಿ ಸ್ಪರ್ಧಿಸಲಿದೆ.
मतदार बंधू आणि भगिनींनो,
— Yugendra Shrinivas Pawar (@yugendraspeaks) October 24, 2024
सप्रेम नमस्कार,
बारामती विधानसभा मतदार संघातून मला महाविकास आघाडीच्या वतीने राष्ट्रवादी काँग्रेस पार्टी – शरदचंद्र पवार पक्षाची उमेदवारी जाहीर करण्यात आली आहे. आदरणीय पवार साहेब, खासदार सुप्रियाताई सुळे, प्रदेशाध्यक्ष मा. जयंतराव पाटील साहेब आणि महाविकास… pic.twitter.com/dvgLCOS4Oi
ಟಿಕೆಟ್ ಪಡೆದ ಪ್ರಮುಖರು
ಎನ್‌ಸಿಪಿ (ಎಸ್‌ಪಿ) ಪಟ್ಟಿಯಲ್ಲಿ ಕಾಣಿಸಿಕೊಂಡ ಪ್ರಮುಖರ ಹೆಸರು ಇಂತಿದೆ. ಇಸ್ಲಾಂಪುರದಿಂದ ಜಯಂತ್ ಪಾಟೀಲ್, ಮುಂಬ್ರಾ-ಕಲ್ವಾದಿಂದ ಜಿತೇಂದ್ರ ಅವಾದ್, ಕಟೋಲ್‌ನಿಂದ ಅನಿಲ್ ದೇಶ್‌ಮುಖ್, ಇಂದಾಪುರದಿಂದ ಹರ್ಷವರ್ಧನ್ ಪಾಟೀಲ್ ಮತ್ತು ತಾಸ್ಗಾಂವ್-ಕಾವ್ತೆಹಂಕಲ್ ಕ್ಷೇತ್ರದಿಂದ ದಿವಂಗತ ಆರ್.ಆರ್.ಪಾಟೀಲ್ ಅವರ ಪುತ್ರ ರೋಹಿತ್ ಪಾಟೀಲ್ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಪ್ರಶಾಂತ್ ಜಗತಾಪ್ ಹಡಪ್ಸರ್‌ನಿಂದ ಕಣಕ್ಕಿಳಿಯಲಿದ್ದಾರೆ.
ಪವಾರ್ ಕುಟುಂಬದ ಸಾಂಪ್ರದಾಯಿಕ ಭದ್ರಕೋಟೆಯಾದ ಬಾರಾಮತಿಯಲ್ಲಿ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಮತ್ತು ಅವರ ಅತ್ತಿಗೆ, ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಸುಪ್ರಿಯಾ ಸುಳೆ ಜಯಗಳಿಸಿದ್ದರು. ಇದೀಗ ಮತ್ತೊಮ್ಮೆ ಕುಟುಂಬದ ನಡುವಿನ ಸ್ಪರ್ಧೆಗೆ ಬಾರಾಮತಿ ಸಾಕ್ಷಿಯಾಗಲಿದೆ. ಅಂತಿಮವಾಗಿ ವಿಜಯಲಕ್ಷ್ಮೀ ಯಾರ ಕಡೆಗೆ ಒಲಿಯುತ್ತಾಳೆ ಎನ್ನುವ ಬಗ್ಗೆ ಈಗಲೇ ಕುತೂಹಲ ಮೂಡಿದೆ.
ಮಹಾರಾಷ್ಟ್ರದಲ್ಲಿ ಒಟ್ಟು 288 ಸೀಟುಗಳಿದ್ದು, ಒಂದೇ ಹಂತದಲ್ಲಿ ನವೆಂಬರ್ 20ರಂದು ಮತದಾನ ನಡೆಯಲಿದೆ. ನ. 23ರಂದು ಫಲಿತಾಂಶ ಪ್ರಕಟವಾಗಲಿದೆ. 2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 105 ಸ್ಥಾನಗಳನ್ನು ಗೆದ್ದರೆ, ಶಿವಸೇನೆ 56 ಮತ್ತು ಕಾಂಗ್ರೆಸ್ 44 ಸ್ಥಾನಗಳನ್ನು ಗಳಿಸಿತ್ತು. 2014ರಲ್ಲಿ ಬಿಜೆಪಿ 122, ಶಿವಸೇನೆ 63 ಮತ್ತು ಕಾಂಗ್ರೆಸ್ 42 ಕಡೆ ಜಯ ಗಳಿಸಿದ್ದವು.
ಈ ಸುದ್ದಿಯನ್ನೂ ಓದಿ: Maharashtra Election: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿಯ ಸೀಟು ಹಂಚಿಕೆಯ ಗೊಂದಲ ಇತ್ಯರ್ಥ; ಉದ್ಧವ್ ಠಾಕ್ರೆ ಶಿವಸೇನೆಯ ಪಟ್ಟಿ ರಿಲೀಸ್