Sunday, 24th November 2024

Maharashtra Election Results: ಯಾರಾಗಲಿದ್ದಾರೆ ಮಹಾರಾಷ್ಟ್ರ ಮುಖ್ಯಮಂತ್ರಿ? ಏಕನಾಥ ಶಿಂಧೆ ಅಥವಾ ದೇವೇಂದ್ರ ಫಡ್ನವಿಸ್?‌

Maharashtra Election Result

ಮುಂಬಯಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ (Maharashtra Election Results) ಬಿಜೆಪಿ (BJP) ನೇತೃತ್ವದ ಮಹಾಯುತಿ (Mahayuti) ಒಕ್ಕೂಟ ಭಾರಿ ಬಹುಮತದೊಂದಿಗೆ ಸರ್ಕಾರ ರಚಿಸಲು ಸಜ್ಜಾಗಿದೆ. ರಾಜ್ಯದ 288 ವಿಧಾನಸಭಾ ಸ್ಥಾನಗಳಲ್ಲಿ 132 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಇದೀಗ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆ ಗಮನ ಪಡೆದುಕೊಂಡಿದೆ.

ಬಿಜೆಪಿಯ ರಾಜ್ಯ ಹಿರಿಯ ಮುಖಂಡ ದೇವೇಂದ್ರ ಫಡ್ನವಿಸ್ (Devendra Fadnavis) ಅವರು ಸ್ಪಷ್ಟ ಮುಂಚೂಣಿಯಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪಕ್ಷ ಹಕ್ಕು ಸಾಧಿಸಬೇಕು ಎಂಬ ಬಲವಾದ ಭಾವನೆ ಬಿಜೆಪಿ ಕಾರ್ಯಕರ್ತರಲ್ಲಿದೆ. ಇದುವರೆಗೂ ಬಿಜೆಪಿಯ ಮಿತ್ರಪಕ್ಷ ಶಿವಸೇನೆ (Eknath Shinde ಬಣ) ಮುಖ್ಯಮಂತ್ರಿ ಸ್ಥಾನದ ಮೇಲೆ ಹಕ್ಕುಸ್ವಾಮ್ಯ ಸಾಧಿಸಿತ್ತು. ಆದರೆ ಇದೀಗ ಲೆಕ್ಕಾಚಾರ ಬದಲಾಗಿದೆ.

ಬಿಜೆಪಿಯ ಸ್ಥಾನಗಳಿಕೆ ಅದರ ನಾಯಕತ್ವದ ಪಾತ್ರವನ್ನು ಖಚಿತಪಡಿಸಿದೆ ಎಂದು ನಾಯಕರು ಭಾವಿಸಿದ್ದಾರೆ. ಅದರ ಪಾಲುದಾರರಾದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಕ್ರಮವಾಗಿ 57 ಮತ್ತು 41 ಸ್ಥಾನಗಳನ್ನು ಗೆದ್ದಿವೆ. ಸದ್ಯಕ್ಕೆ ಹಾಲಿ ಸಿಎಂ ಏಕನಾಥ್ ಶಿಂಧೆ ಅವರ ನೇತೃತ್ವವನ್ನೇ ಶಿವಸೇನೆ ಪ್ರತಿಪಾದಿಸುತ್ತಿದೆ. ಅವರೊಂದಿಗೇ ಮುಂದುವರಿಯೋಣ ಎಂದು ಹೇಳುವ ಒಂದು ಬಣವೂ ಬಿಜೆಪಿಯಲ್ಲಿದೆ. ಹೀಗಾದರೆ ಫಡ್ನವೀಸ್ ಅವರನ್ನು ರಾಷ್ಟ್ರೀಯ ರಂಗಕ್ಕೆ ತರಬಹುದು ಎಂದು ಇದರ ನಾಯಕರು ಹೇಳುತ್ತಾರೆ. ಅವರು ಪಕ್ಷದ ಅಧ್ಯಕ್ಷರಾಗಿ ಜೆಪಿ ನಡ್ಡಾ ಅವರ ಉತ್ತರಾಧಿಕಾರಿಯಾಗಬಹುದು ಎಂದು ಸೂಚಿಸುತ್ತಾರೆ.

ಬಿಜೆಪಿಯ ಹಿರಿಯ ನಾಯಕರೊಬ್ಬರ ಪ್ರಕಾರ, ಶಿಂಧೆ ಅವರನ್ನು ಬದಲಾಯಿಸುವುದು, ಬಿಜೆಪಿಯ ಇಮೇಜ್‌ಗೆ ವಿರುದ್ಧವಾಗಬಹುದು. ಯಾಕೆಂದರೆ ಮೈತ್ರಿಧರ್ಮದ ಪ್ರಶ್ನೆ ಹಾಗೂ ಶಿಂಧೆ ನಾಯಕತ್ವದಲ್ಲೇ ಚುನಾವಣೆ ಎದುರಿಸಲಾಗಿದೆ. “ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ ಮೈತ್ರಿಕೂಟದ ಪಾಲುದಾರರು ಅದನ್ನು ನಂಬುವಂತೆ ನೋಡಿಕೊಳ್ಳಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದನೆ. ಆದ್ದರಿಂದ ನಾವು ನಿರ್ಧರಿಸುವ ಮೊದಲು ಎರಡು ಬಾರಿ ಯೋಚಿಸುತ್ತೇವೆ. ನಾವು ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಬಿಜೆಪಿ ನಾಯಕತ್ವ ಅಪನಂಬಿಕೆ ಹುಟ್ಟುವಂಥ ಅಥವಾ ಎನ್‌ಡಿಎಯಲ್ಲಿನ ತನ್ನ ಪಾಲುದಾರರ ಅಭಿಮಾನ ಕಳೆದುಕೊಳ್ಳುವಂತೆ ಖಂಡಿತವಾಗಿಯೂ ಏನನ್ನೂ ಮಾಡುವುದಿಲ್ಲ” ಎಂದು ಈ ನಾಯಕರು ಹೇಳುತ್ತಾರೆ.

ಏಕನಾಥ್ ಶಿಂಧೆ ಸರ್ಕಾರವು ಕೈಗೊಂಡ ಕಲ್ಯಾಣ ಯೋಜನೆಗಳು ಮತ್ತು ಕ್ರಮಗಳು ಮಹಾಯುತಿ ಒಕ್ಕೂಟಕ್ಕೆ “ಸದ್ಭಾವನೆಯನ್ನು” ಸೃಷ್ಟಿಸಿದೆ ಎಂದು ಮೂಲಗಳು ಸೂಚಿಸಿವೆ. ಅಲ್ಲದೆ ಶಿಂಧೆ ಅವರು ಮೈತ್ರಿಗಾಗಿ ವ್ಯಾಪಕ ಪ್ರಚಾರ ನಡೆಸಿದರು. ರಾಜ್ಯದಾದ್ಯಂತ 75 ಸಾರ್ವಜನಿಕ ಸಭೆಗಳನ್ನು ನಡೆಸಿದರು. ಅವರ ಪಕ್ಷದ ಗಳಿಕೆ 2019ರಲ್ಲಿ ಅವಿಭಜಿತ ಸೇನೆಯಾಗಿ 56 ಇತ್ತು, ಈ ಬಾರಿ ಅದನ್ನೂ ದಾಟಿದೆ.

ಆದರೆ, ಲೋಕಸಭೆ ಚುನಾವಣೆಯ ನಂತರ ನಡೆದ ಹಲವು ಸಭೆಗಳಲ್ಲಿ, ಬಿಜೆಪಿ ನಾಯಕತ್ವವು ತನ್ನದೇ ಮುಖ್ಯಮಂತ್ರಿಯನ್ನು ಹೊಂದಲು 100 ಪ್ಲಸ್ ಗಡಿ ದಾಟಲು ಶ್ರಮಿಸಬೇಕು ಎಂದು ಹೇಳಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಫಡ್ನವಿಸ್ ಅವರು ಮುಖ್ಯಮಂತ್ರಿ ಆಗುವುದನ್ನು ಖಚಿತಪಡಿಸಿಕೊಳ್ಳಲು ಈ ವಿಧಾನಸಭಾ ಚುನಾವಣೆ ಎಂದು ಸೂಚಿಸಿದ್ದರು.

ಈ ಬಗ್ಗೆ ಶಿವಸೇನೆ ಮತ್ತು ಎನ್‌ಸಿಪಿಯಲ್ಲಿ ಕಳವಳ ವ್ಯಕ್ತವಾಗಿದೆ. “ಬಿಜೆಪಿಗೆ ಸರ್ಕಾರ ರಚಿಸಲು ಯಾವುದೇ ಪಕ್ಷದ ಬೆಂಬಲದ ಅಗತ್ಯವಿಲ್ಲ ಎಂಬುದು ನಿಜ. ಏಕೆಂದರೆ ಅವರು ಸ್ವಂತವಾಗಿ 130 ಸ್ಥಾನಗಳನ್ನು ದಾಟಿದ್ದಾರೆ. ಆದರೆ ಮೈತ್ರಿಧರ್ಮವನ್ನು ಅನುಸರಿಸಲಾಗುತ್ತದೆ ಮತ್ತು ಯಾರನ್ನೂ ನಿರ್ಲಕ್ಷಿಸುವುದಿಲ್ಲ ಎಂದು ನಾವು ಭಾವಿಸುತ್ತೇವೆ” ಎಂದಿರುವ ಕೆಲವು ಶಿವಸೇನೆ ನಾಯಕರು “ಏಕನಾಥ್ ಶಿಂಧೆ ಅವರನ್ನು ಸಿಎಂ ಆಗಿ ನೋಡಲು ಇಷ್ಟಪಡುತ್ತೇನೆ” ಎಂದು ಹೇಳಿದ್ದಾರೆ.

ಎನ್‌ಸಿಪಿಯ ನಾಯಕರೊಬ್ಬರು “ನಾವೆಲ್ಲರೂ ಮೈತ್ರಿಯಾಗಿ ಹೋರಾಡಿ ಗೆದ್ದಿರುವುದರಿಂದ ಹಿಂದಿನ ಸರ್ಕಾರದಂತೆ ನಾವು ಸರ್ಕಾರದಲ್ಲಿ ಒಟ್ಟಿಗೆ ಇರುತ್ತೇವೆ ಎಂದು ನಾವು ಭಾವಿಸುತ್ತೇವೆ” ಎಂದಿದ್ದಾರೆ.

ಗೆಲುವಿನ ನಂತರ ಮುಂಬೈಯಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಫಡ್ನವೀಸ್‌, “ಇದು ಮಹಾಯುತಿಗೆ ಬಂದ ಜನಾದೇಶ. ಸಿಎಂ ವಿಚಾರದಲ್ಲಿ ನಮಗೆ ಯಾವುದೇ ವಿವಾದ ಕಾಣಿಸುತ್ತಿಲ್ಲ. ಮುಖ್ಯಮಂತ್ರಿ ಸ್ಥಾನ ಮತ್ತು ಸರ್ಕಾರ ರಚನೆಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ಮೂರೂ ಪಕ್ಷಗಳು ಒಟ್ಟಾಗಿ ತೆಗೆದುಕೊಳ್ಳುತ್ತವೆ” ಎಂದು ಹೇಳಿದ್ದರು.

ಏಕನಾಥ್ ಶಿಂಧೆ ಅವರು ಕೂಡ, “ಮಹಾಯುತಿಯಲ್ಲಿ ಜನರು ಇಟ್ಟಿರುವ ನಂಬಿಕೆಯಿಂದ ನಾವು ಸಂತೋಷಗೊಂಡಿದ್ದೇವೆ. ನಾವು ಒಟ್ಟಿಗೆ ಇರುತ್ತೇವೆ ಮತ್ತು ಮಹಾರಾಷ್ಟ್ರಕ್ಕಾಗಿ ಕೆಲಸ ಮಾಡುತ್ತೇವೆ. ನಾವು ಒಟ್ಟಾಗಿ ಚುನಾವಣೆ ಎದುರಿಸಿದಂತೆಯೇ ಸುಗಮ ಚರ್ಚೆಯ ನಂತರ ಒಮ್ಮತ ಮೂಡಿಸಿ ಸಿಎಂ ನಿರ್ಧಾರ ಮಾಡುತ್ತೇವೆ” ಎಂದಿದ್ದಾರೆ.

ಚುನಾವಣಾ ಯಶಸ್ಸಿನಿಂದ ಉತ್ತೇಜಿತರಾಗಿರುವ ಅಜಿತ್ ಪವಾರ್ ಅವರು, “ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರವನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ. ನವೆಂಬರ್ 26ರ ಮೊದಲು ಸರ್ಕಾರ ರಚನೆಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು” ಎಂದು ಹೇಳಿದ್ದಾರೆ. ಅಜಿತ್ ಪವಾರ್ ಕೂಡ ಸಿಎಂ ಆಗಬೇಕೆಂದು ಎನ್‌ಸಿಪಿ ಧ್ವನಿ ಎತ್ತಿದೆ.

“ನಾವು ಏಕನಾಥ್ ಶಿಂಧೆ ಅವರನ್ನು ಸಿಎಂ ಆಗಿ ಮುಂದುವರಿಸಲು ಬಯಸುತ್ತೇವೆ. ಉದಾಹರಣೆಗೆ ಬಿಹಾರದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷ. ಆದರೆ ಅದು ಜೆಡಿಯುನ ನಿತೀಶ್ ಕುಮಾರ್ ಅವರಿಗೆ ಸಿಎಂ ಸ್ಥಾನವನ್ನು ಬಿಟ್ಟುಕೊಟ್ಟಿದೆ” ಎಂದು ಶಿವಸೇನೆಯ ನಾಯಕರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Ajit Pawar: ಮಹಾರಾಷ್ಟ್ರದ ಮುಂದಿನ ಸಿಎಂ ಅಜಿತ್‌ ಪವಾರ್‌? ರಿಸಲ್ಟ್‌ಗೂ ಮುನ್ನ ರಾರಾಜಿಸಿದ ಪೋಸ್ಟರ್‌