ಮುಂಬೈ: ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರ ಜೋರಾಗಿದೆ, ನ.20ರಂದು ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ (Maharashtra Election) ಪಕ್ಷಗಳ ಪ್ರಚಾರದ ಅಬ್ಬರವೂ ಜೋರಾಗಿದೆ. ಇದರೊಂದಿಗೆ ಪಕ್ಷ-ಪಕ್ಷಗಳ ನಡುವೆ ರಾಜಕೀಯ ಕೆಸರೆರಚಾಟಗಳೂ ನಡೆಯುತ್ತಿವೆ. ಇದೀಗ ಶಿವಸೇನಾ ಯುಬಿಟಿ ಬಣದ ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ಅವರ ಬ್ಯಾಗನ್ನು ಚುನಾವಣಾಧಿಕಾರಿಗಳು ತಪಾಸಣೆ ನಡೆಸಿರುವ ವಿಚಾರ ಭಾರೀ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಹೆಲಿಕಾಪ್ಟರ್ ಅನ್ನೂ ತಪಾಸಣೆ ನಡೆಸಿದ್ದಾರೆ.
ಮಹಾರಾಷ್ಟ್ರದ ಲಾತೂರ್ ಗೆ (Latur) ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರ ಹೆಲಿಕಾಪ್ಟರನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಉದ್ಧವ್ ಠಾಕ್ರೆ ಅವರ ಬ್ಯಾಗನ್ನು ಚುನಾವಣಾಧಿಕಾರಿಗಳು ಎರಡೆರಡು ಬಾರಿ ತಪಾಸಣೆ ನಡೆಸಿದ್ದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ ವಿಚಾರದಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಠಾಕ್ರೆ ಮತ್ತು ಅವರ ಮಿತ್ರಪಕ್ಷಗಳ ನಾಯಕರು ಆರೋಪಿಸಿದ್ದರು.
ಲಾತೂರ್ ನಲ್ಲಿ ಚುನಾವಣಾ ಅಧಿಕಾರಿಗಳು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಹೆಲಿಕಾಪ್ಟರನ್ನು ತಪಾಸಣೆ ನಡೆಸುತ್ತಿರುವ ಹಾಗೂ ಅವರ ಬ್ಯಾಗನ್ನು ಪರಿಶೀಲಿಸುತ್ತಿರುವ ವಿಡಿಯೋ ಇದೀಗ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಈ ವಿಚಾರಕ್ಕೆ ಸಂಬಂಧಸಿದಂತೆ ಪ್ರತಿಕ್ರಿಯೆ ನೀಡಿರುವ ಚುನಾವಣಾ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಚುನಾವಣೆಯ ಸಂದರ್ಭದಲ್ಲಿ ಎಂಸಿಸಿ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಲು ಇಂತಹ ಕ್ರಮ ಸಹಜವಾಗಿ ನಡೆಲಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದಕ್ಕೂ ಮೊದಲು ಉದ್ಧವ್ ಠಾಕ್ರೆ ಅವರ ಬ್ಯಾಗುಗಳನ್ನು ಸೋಮವಾರದಂದು ಯವತ್ನಾಳ್‌ನಲ್ಲಿ ತಪಾಸಣೆ ನಡೆಸಲಾಗಿತ್ತು. ಅದೇ ದಿನ ಲಾತೂರ್‌ನಲ್ಲೂ ಠಾಕ್ರೆ ಅವರ ಬ್ಯಾಗನ್ನು ತಪಾಸಣೆ ನಡೆಸಿದ್ದು ಹೊಸ ವಿವಾದಕ್ಕೆ ನಾಂದಿ ಹಾಡಿತ್ತು. ಲಾತೂರ್ ನಲ್ಲಿ ಶಿವಸೇನಾ ಯುಟಿಬಿ ಬಣದ ಮಾಜಿ ಶಾಸಕ ದಿನಕರ್ ಮಾನೆ ಅವರ ಪರ ಪ್ರಚಾರಕ್ಕೆ ಆಗಮಿಸಿದ್ದರು.
ಚುನಾವಣಾ ಅಧಿಕಾರಿಗಳು ಎರಡೆರಡು ಕಡೆಗಳಲ್ಲಿ ತನ್ನ ಬ್ಯಾಗನ್ನು ತಪಾಸಣೆ ಮಾಡಿರುವುದು ಠಾಕ್ರೆ ಅವರಿಗೆ ಕಿರಿಕಿರಿ ಉಂಟುಮಾಡಿತ್ತು, ಮತ್ತು ಅವರು ಅಧಿಕಾರಿಗಳ ಉದ್ದೇಶವನ್ನು ಪ್ರಶ್ನೆ ಮಾಡಿದ್ದರು. ಮಾತ್ರವಲ್ಲದೇ ಆ ಅಧಿಕಾರಿಗಳ ಹೆಸರು, ಕಾರ್ಯಸ್ಥಳ ಮತ್ತು ಅಪಾಯಿಂಟ್‌ಮೆಂಟ್ ವಿವರಗಳನ್ನು ಕೇಳಿದ್ದರು. ಈ ವಿಡಿಯೋದಲ್ಲಿ ಠಾಕ್ರೆ ಅವರು, ʼಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರ ನಡೆಸುವ ಸಂದರ್ಭದಲ್ಲಿ ಅವರ ಬ್ಯಾಗುಗಳನ್ನೂ ಸಹ ಇದೇ ರೀತಿಯಲ್ಲಿ ತಪಾಸಣೆ ನಡೆಸುತ್ತೀರಾ..?ʼ ಎಂದು ಪ್ರಶ್ನಿಸಿದ್ದರು. ಮತ್ತು ಈ ಮೂಲಕ ಠಾಕ್ರೆ ಅವರು, ಅಧಿಕಾರಿಗಳು ಕೇವಲ ವಿರೋಧಪಕ್ಷದ ನಾಯಕರನ್ನು ಮಾತ್ರವೇ ಟಾರ್ಗೆಟ್ ಮಾಡ್ತಿದ್ದಾರೆ ಎಂಬ ಸಂಶಯವನ್ನು ವ್ಯಕ್ತಪಡಿಸಿದ್ದರು.
ಇದೇ ಸಂದರ್ಭದಲ್ಲಿ, ಮಹಾಯುತಿ ಕೂಟದ ನಾಯಕರು ಠಾಕ್ರೆ ಅವರ ಆರೋಪಕ್ಕೆ ತಿರುಗೇಟು ನೀಡಿದ್ದು, ʼಏನಿಲ್ಲವೆಂದಾದ ಮೇಲೆ ಅವರು ಯಾಕೆ ಭಯಪಡಬೇಕು..ʼ ಎಂದು ಪ್ರಶ್ನಿಸಿದ್ದಾರೆ. ಇನ್ನು ಚುನಾವಣಾಧಿಕಾರಿಗಳ ಈ ಕ್ರಮವನ್ನು ಶಿವಸೇನಾ ಯುಟಿಬಿ ಬಣದ ನಾಯಕ ಸಂಜಯ್ ರಾವುತ್ ಖಂಡಿಸಿದ್ದು, ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: P.M Narendra Modi : ಮಹಾರಾಷ್ಟ್ರವನ್ನು ಕಾಂಗ್ರೆಸ್ ಎಟಿಎಂ ಆಗಲು ಬಿಡಲ್ಲ; ಪ್ರಧಾನಿ ಮೋದಿ ಗುಡುಗು