ಮುಂಬೈ: ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮತ ಕೇಳುವುದು ಸರ್ವೇ ಸಾಮಾನ್ಯ. ಮೂಲಭೂತ ಸೌಕರ್ಯ, ಶಿಕ್ಷಣ , ಆರೋಗ್ಯ ಮುಂತಾದವುಗಳ ಬಗ್ಗೆ ಭರವಸೆಗಳನ್ನು ನೀಡುವುವರನ್ನು ನೋಡಿರುತ್ತೇವೆ. ಇಲ್ಲೊಬ್ಬ ಅಭ್ಯರ್ಥಿ ತನಗೆ ಮತ ಹಾಕಿದರೆ ಅವಿವಾಹಿತ ಯುವಕರಿಗೆ ಮದುವೆ ಮಾಡಿಸುತ್ತೇನೆ ಎಂದು ಭರವಸೆ ನೀಡಿರುವುದು ಬಹಳ ಸುದ್ದಿಯಾಗುತ್ತಿದೆ(Maharashtra Elections 2024).
ಹೌದು ಶರದ್ ಪವಾರ್ ನೇತೃತ್ವದ ಎನ್‌ಸಿಪಿ (NCP) ಪಕ್ಷದ ಅಭ್ಯರ್ಥಿಯೊಬ್ಬರು ನನಗೆ ಮತ ನೀಡಿ ನಾನು ನಿಮಗೆ ಮದುವೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಮುಂಬರಲಿರುವ ವಿಧಾನಸಭಾ ಚುನಾವಣೆಗೆ ( Maharashtra Election) ಎನ್‌ಸಿಪಿ ಪಕ್ಷದ ಅಭ್ಯರ್ಥಿ ರಾಜೇಸಾಹೇಬ್ ದೇಶಮುಖ್ (Rajesaheb Deshmukh) ಪಾರ್ಲಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದು, ಪ್ರಚಾರದ ವೇಳೆ ನೆರೆದಿದ್ದ ಯುವಕರಿಗೆ ಈ ಭರವಸೆ ನೀಡಿದ್ದಾರೆ.
Unique poll promise@NCPspeaks candidate #RajasahebDeshmukh says on getting elected from Beed district's #Parli assembly constituency, he will get all the bachelors married#Maharashtra #PoliticsToday #MaharashtraAssembly pic.twitter.com/TfRm7kRtO8
— Mohammed Akhef TOI (@MohammedAkhef) November 6, 2024
ಪಾರ್ಲಿ ಹಾಗೂ ಸುತ್ತಮುತ್ತಲಿನ ಯುವಕರಿಗೆ ಮದುವೆಯಾಗಲು ಹುಡುಗಿ ಸಿಗದಿದ್ದರಿಂದ ಗ್ರಾಮದಲ್ಲಿ ನೂರಾರು ಯುವಕರು ಅವಿವಾಹಿತಾರಾಗಿಯೇ ಉಳಿದಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ ಗ್ರಾಮದ ಯುವಕರಿಗೆ ವಿವಾಹವಾಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದರು. ಇದೀಗ ಮತ ಹಾಕಿದರೆ ಮದುವೆ ಮಾಡುಸುವೆ ಎಂದಿದ್ದು ಪಾರ್ಲಿ ಯುವಕರಿಗೆ ಭರ್ಜರಿ ಆಫರ್ ಕೊಟ್ಟಿದ್ದಾರೆ.
ಇದರ ಬಗ್ಗೆ ಮಾತನಾಡಿದ ಎನ್‌ಸಿಪಿ ಅಭ್ಯರ್ಥಿ ರಾಜೇಸಾಹೇಬ್ ದೇಶಮುಖ್ “ಕ್ಷೇತ್ರದಲ್ಲಿ ಯುವಕರಿಗೆ ಮದುವೆ ಆಗುತ್ತಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಇದನ್ನು ಹೇಳಿದ್ದೇನೆ. ಪಾರ್ಲಿ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಯಾವುದೇ ಕೈಗಾರಿಕೆ ಹಾಗೂ ದೊಡ್ಡ ಕಂಪನಿಗಳಿಲ್ಲ. ಇದರಿಂದ ಕ್ಷೇತ್ರದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ ಹಾಗೂ ಕೆಲವರು ಬೇರೆ ನಗರಗಳಿಗೆ ಹೋಗಿ ಉದ್ಯೋಗ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಮದಲ್ಲಿ ವಾಸಿಸುವ ಯುವಕರಿಗೆ ಹುಡುಗಿ ಕೊಡಲು ಹಿಂದೇಟು ಹಾಕುತ್ತಾರೆ. ನಾನು ಶಾಸಕನಾಗಿ ಆಯ್ಕೆಯಾದರೆ ಉದ್ಯೋಗ ಒದಗಿಸುತ್ತೇನೆ. ಹಲವಾರು ಕೈಗಾರಿಕೆಗಳನ್ನು ಕ್ಷೇತ್ರಕ್ಕೆ ತರುತ್ತೇನೆ” ಎಂದು ಭರವಸೆ ನೀಡಿದ್ದಾರೆ.
ಸರ್ಕಾರದ ಮೇಲೆ ಹರಿಹಾಯ್ದ ಅವರು ಈ ಪ್ರದೇಶದಲ್ಲಿ ಬಹುತೇಕ ಎಲ್ಲಾ ಸಹಕಾರಿ ಸಂಸ್ಥೆಗಳು ಮತ್ತು ಕೈಗಾರಿಕೆಗಳು ಮುಚ್ಚಲ್ಪಟ್ಟಿವೆ. ರಾಜ್ಯ ಸರ್ಕಾರ ಹೊಸ ಶಾಲೆಗಳಿಗೆ ಅನುಮೋದನೆ ನೀಡುವುದನ್ನು ನಿಲ್ಲಿಸಿದ್ದು, ಹೊಸ ಶಿಕ್ಷಕರ ನೇಮಕಾತಿ ಇಲ್ಲದಂತಾಗಿದೆ. ಮುಚ್ಚಿದ ಸಹಕಾರಿ ಸಂಸ್ಥೆಗಳಾದ ಸಕ್ಕರೆ ಕಾರ್ಖಾನೆಗಳು ಮತ್ತು ನೂಲುವ ಗಿರಣಿಗಳನ್ನು ಪುನರಾರಂಭಿಸಲು ಮತ್ತು ಕೈಗಾರಿಕಾ ಘಟಕಗಳನ್ನು ಪುನರಾರಂಭಿಸಲು ಹಣ ಬಿಡುಗಡೆ ಮಾಡಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವುದು ನನ್ನ ಮೊದಲ ಕಾರ್ಯವಾಗಿದೆ ಎಂದು ಹೇಳಿದ್ದಾರೆ.
ತಮ್ಮ ಪ್ರತಿಸ್ಪರ್ಧಿ ಅಜಿತ್ ಪವಾರ್ ಅವರ ಪಕ್ಷದ ಧನಂಜಯ್ ಮುಂಡೆ ವಿರುದ್ದ ವಾಗ್ದಾಳಿ ನಡೆಸಿ ಸರ್ಕಾರದಿಂದ ಅನುದಾನ ತರಲೂ ಆಗಲಿಲ್ಲ, ಇರುವ ಕೈಗಾರಿಕೆಗಳು ಮುಚ್ಚದಂತೆ ನೋಡಿಕೊಳ್ಳಲು ಆಗಲಿಲ್ಲ ಎಂದಿದ್ದಾರೆ.