Sunday, 27th October 2024

Maharashtra Elections 2024 : ಸ್ವರ ಭಾಸ್ಕರ್‌ ಪತಿ ಫಹಾದ್‌ಗೆ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಟಿಕೆಟ್‌

Maharashtra Elections 2024

ನವದೆಹಲಿ: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರ ಪತಿ ಫಹಾದ್ ಅಹ್ಮದ್ ಅವರು ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ (Maharashtra Elections 2024) ಅನುಶಕ್ತಿ ನಗರದಿಂದ ಸ್ಪರ್ಧಿಸಲು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಶರದ್ ಪವಾರ್ ಬಣ) ಟಿಕೆಟ್ ಗಿಟ್ಟಿಕೊಂಡಿದ್ದಾರೆ. ಇದಕ್ಕೂ ಮೊದಲು ಅಹ್ಮದ್ ಸಮಾಜವಾದಿ ಪಕ್ಷದ ಭಾಗವಾಗಿದ್ದರು. ಅಲ್ಲದೆ ಆ ಪಕ್ಷದ ಯುವ ಘಟಕ ಸಮಾಜವಾದಿ ಯುವಜನ ಸಭಾದ ರಾಜ್ಯ ಅಧ್ಯಕ್ಷರಾಗಿದ್ದರು. ಎನ್‌ಸಿಪಿ (ಶರದ್ ಪವಾರ್‌) ಮುಖಂಡ ಮತ್ತು ಮಾಜಿ ರಾಜ್ಯ ಸಚಿವ ಜಯಂತ್ ಪಾಟೀಲ್ ಭಾನುವಾರ ಅಹಮದ್ ತಮ್ಮ ಪಕ್ಷದ ಟಿಕೆಟ್ ಪಡೆದುಕೊಂಡಿದ್ದಾರೆ ಎಂದು ಘೋಷಿಸಿದ್ದಾರೆ.

ಫಹಾದ್ ಅಹ್ಮದ್ ಉತ್ತಮ ಶಿಕ್ಷಣ ಪಡೆದ ಮುಸ್ಲಿಂ ಯುವಕ ಮತ್ತು ದೇಶಾದ್ಯಂತ ಸಾಮಾಜಿಕ ಕಾರ್ಯಕರ್ತನಾಗಿ ಕೆಲಸ ಮಾಡಿದ್ದಾರೆ. ಅಂತಹ ನಾಯಕರಿಗೆ ನಾವು ಅವಕಾಶ ನೀಡಬೇಕು ಎಂದು ಜನರು ಬಯಸುತ್ತಾರೆ. ಅವರು ಈ ಹಿಂದೆ ಸಮಾಜವಾದಿ ಪಕ್ಷದಲ್ಲಿದ್ದರು.  ನಾವು ಎಸ್ಪಿಯೊಂದಿಗೆ ಮಾತುಕತೆ ನಡೆಸಿದ್ದೇವೆ. ಆ ಬಳಿಕ ಅವರು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ನಾವು ಅವರಿಗೆ ನಮ್ಮ ಪಕ್ಷದಿಂದ ಅನುಶಕ್ತಿ ನಗರ ಕ್ಷೇತ್ರದಿಂದ ಟಿಕೆಟ್ ನೀಡಿದ್ದೇವೆ ಪಾಟೀಲ್ ಹೇಳಿದ್ದಾರೆ.

ಈ ಹಿಂದೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿದಂತೆ ಸಮಾಜವಾದಿ ಪಕ್ಷದ ಮುಖಂಡ ಅಬು ಅಜ್ಮಿ ಅವರು ಶರದ್ ಪವಾರ್ ಅವರೊಂದಿಗೆ ಮಾತನಾಡಿದ್ದಾರೆ, ಪವಾರ್ ನೇತೃತ್ವದ ಪಕ್ಷಕ್ಕೆ ಅಭ್ಯರ್ಥಿ ಇಲ್ಲದಿದ್ದರೆ ಫಹಾದ್ ಅಹ್ಮದ್ ಅನುಶಕ್ತಿ ನಗರದಿಂದ ಎನ್ಸಿಪಿ (ಎಸ್ಪಿ) ಅಭ್ಯರ್ಥಿಯಾಗಿ ಸ್ಪರ್ಧಿಸಬಹುದು ಎಂಬುದನ್ನು ಸ್ಪಷ್ಟಪಡಿಸಿದ್ದರು.

ವಿದ್ಯಾರ್ಥಿ ಸಂಘಗಳಲ್ಲಿ ಸಕ್ರಿಯರಾಗಿದ್ದ ಫಹಾದ್ ಅಹ್ಮದ್ 2022 ರಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರಿದ್ದರು. ಅವರು ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳ ಶುಲ್ಕ ಮನ್ನಾಕ್ಕಾಗಿ ಅವರು ಆಂದೋಲನ ಸಂಘಟಿಸಿದ್ದರು. ಪೌರತ್ವ (ಸೌಕರ್ಯ) ಕಾಯ್ದೆ (ಸಿಎಎ), 2019 ರ ವಿರುದ್ಧವೂ ಅವರು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆ ವೇಳೆ ಪರಿಚಿತರಾದ ಸ್ವರಾ ಭಾಸ್ಕರ್ ಅವರನ್ನು ಫೆಬ್ರವರಿ 16, 2023 ರಂದು ವಿವಾಹವಾಗಿದ್ದರು.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ಕ್ಕೆ ಇನ್ನು ಒಂದು ತಿಂಗಳಿಗಿಂತ ಕಡಿಮೆ ಇದೆ. ನವೆಂಬರ್ 20ರಂದು ಮತದಾನ ನಡೆಯಲಿದೆ. ನವೆಂಬರ್ 23ರಂದು ಫಲಿತಾಂಶ ಹೊರಬೀಳಲಿದೆ.