ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ (Maharashtra Elections 2024) ಬಿಜೆಪಿ ತನ್ನ 22 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಪ್ರಕಾಶ್ ಭರ್ಸಕಲೆ (ಅಕೋಟ್), ದೇವಯಾನಿ ಫರಾಂಡೆ (ನಾಸಿಕ್ ಸೆಂಟ್ರಲ್), ಕುಮಾರ್ ಅಯಲಾನಿ (ಉಲ್ಲಾಸ್‌ನಗರ), ರವೀಂದ್ರ ಪಾಟೀಲ್ (ಪೆನ್), ಭೀಮರಾವ್ ತಪ್ಕಿರ್ (ಖಡಕ್ವಾಸ್ಲಾ), ಸುನಿಲ್ ಕಾಂಬ್ಳೆ (ಪುಣೆ ಕಂಟೋನ್ಮೆಂಟ್) ಮತ್ತು ಸಮಧನ್ ಔತಾಡೆ (ಪಂಢರಪುರ) ಸೇರಿದಂತೆ ಪ್ರಮುಖ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಇದರೊಂದಿಗೆ ಬಿಜೆಪಿ ತನ್ನ ಆರಂಭಿಕ ಪಟ್ಟಿ 99 ರ ನಂತರ ಒಟ್ಟು 121 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಹೆಸರಿದಂತಾಗಿದೆ. ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ) ಮತ್ತು ಅಜಿತ್ ಪವಾರ್ ನೇತೃತ್ವದ ಎನ್ಸಿಪಿಯನ್ನು ಒಳಗೊಂಡ ಮಹಾಯುತಿ ಮೈತ್ರಿಕೂಟವು ಸೀಟು ಹಂಚಿಕೆ ವಿವರ ಇನ್ನೂ ಅಂತಿಮವಾಗಿಲ್ಲ. ಮುಂದಿನ ತಿಂಗಳು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಉಳಿದ ಏಳರಿಂದ ಎಂಟು ಸ್ಥಾನಗಳನ್ನು ಹಂಚಿಕೆ ಮಾಡುವ ಬಗ್ಗೆ ಮೂರು ಮಿತ್ರಪಕ್ಷಗಳ ನಡುವೆ ಇನ್ನೂ ಚರ್ಚೆಗಳು ನಡೆಯುತ್ತಿವೆ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬವಾನ್ಕುಲೆ ಇಂದು ಬೆಳಿಗ್ಗೆ ಹೇಳಿದ್ದಾರೆ.
ಮೂರು ಮಹಾಯುತಿ ಮೈತ್ರಿ ಪಾಲುದಾರರಲ್ಲಿ, ಬಿಜೆಪಿ ಮತ್ತು ಅಜಿತ್ ಪವಾರ್ ಅವರ ಎನ್ಸಿಪಿ ತಲಾ ಎರಡು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದರೆ, ಏಕನಾಥ್ ಶಿಂಧೆ ಅವರ ಶಿವಸೇನೆ ಇಲ್ಲಿಯವರೆಗೆ ಒಂದು ಪಟ್ಟಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ: MLA Satish Sail: ಬೇಲೆಕೇರಿ ಅದಿರು ನಾಪತ್ತೆ ಕೇಸ್; ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಮಹಾ ವಿಕಾಸ್ ಅಘಾಡಿ (ಎಂವಿಎ) ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್ಸಿಪಿ (ಶರದ್ ಪವಾರ್ ಬಣ) ತಲಾ 85 ಸ್ಥಾನಗಳೊಂದಿಗೆ 255 ಕ್ಷೇತ್ರಗಳಿಗೆ ತನ್ನ ಸ್ಥಾನ ಹಂಚಿಕೆ ವ್ಯವಸ್ಥೆ ಅಂತಿಮಗೊಳಿಸಿದೆ. ಉಳಿದ 23 ಸ್ಥಾನಗಳನ್ನು ಪ್ರತಿ ಪಕ್ಷದ ಅಭ್ಯರ್ಥಿಗಳ ಪಟ್ಟಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಮಹಾಯುತಿ ಮೈತ್ರಿಕೂಟ ಮತ್ತು ಪ್ರತಿಪಕ್ಷ ಎಂವಿಎ ಎರಡೂ ಸೀಟು ಹಂಚಿಕೆ ಒಪ್ಪಂದಗಳನ್ನು ಅಂತಿಮಗೊಳಿಸಲು ಯತ್ನಿಸುತ್ತಿದೆ.
ರಾಜ್ಯದ 288 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 20 ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ. 2019 ರಲ್ಲಿ ಬಿಜೆಪಿ 105, ಶಿವಸೇನೆ 56 ಮತ್ತು ಕಾಂಗ್ರೆಸ್ 44 ಸ್ಥಾನಗಳನ್ನು ಗೆದ್ದರೆ, 2014 ರಲ್ಲಿ ಬಿಜೆಪಿ 122, ಶಿವಸೇನೆ 63 ಮತ್ತು ಕಾಂಗ್ರೆಸ್ 42 ಸ್ಥಾನಗಳೊಂದಿಗೆ ಬಲವಾದ ವಿಜಯವನ್ನು ಗಳಿಸಿತ್ತು.