ಮುಂಬೈ: ನ. 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ (Maharashtra Poll)ಗೆ ಮುಂಚಿತವಾಗಿ ಸುಪ್ರೀಂ ಕೋರ್ಟ್ (Supreme Court) ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (Nationalist Congress Party)ದ ಅಜಿತ್ ಪವಾರ್ ಬಣಕ್ಕೆ ಮಹತ್ವದ ಸೂಚನೆ ನೀಡಿದ್ದು, ಶರದ್ ಪವಾರ್ ಅವರ ಯಾವುದೇ ಫೋಟೊಗಳು, ವಿಡಿಯೊಗಳನ್ನು ಬಳಸದಂತೆ ತಿಳಿಸಿದೆ. ಚುನಾವಣೆಗೆ ಮುಂಚಿತವಾಗಿ ಎರಡೂ ಕಡೆಯವರು ತಮ್ಮ ಪ್ರತ್ಯೇಕ ಗುರುತುಗಳನ್ನು ಕಾಪಾಡಿಕೊಳ್ಳುವಂತೆ ತನ್ನ ಹಿಂದಿನ ಆದೇಶಕ್ಕೆ ಅನುಸಾರವಾಗಿ ನ್ಯಾಯಾಲಯವು ಈ ಸೂಚನೆಗಳನ್ನು ನೀಡಿದೆ. ಎನ್‌ಸಿಪಿಯಲ್ಲಿ ಅಜಿತ್ ಪವಾರ್ ಮತ್ತು ಶರದ್ ಪವಾರ್ ಎಂಬ 2 ಬಣಗಳಿವೆ.
ತಮ್ಮ ಕಾಲುಗಳ ಮೇಲೆ ನಿಲ್ಲಲು ಕಲಿಯಿರಿ ಎಂದು ಸುಪ್ರೀಂ ಕೋರ್ಟ್ ಈ ಮೂಲಕ ಅಜಿತ್ ಪವಾರ್ ಬಣಕ್ಕೆ ತಿಳಿಸಿದೆ.
'Stand On Your Own Legs' : Supreme Court Asks NCP(Ajit Pawar) To Not Use Photos & Videos Of Sharad Pawar For Maharashtra Elections
— Live Law (@LiveLawIndia) November 13, 2024
Read more: https://t.co/T2cUSgvwaf#SupremeCourt #NCP #SharadPawar #AjitPawar pic.twitter.com/B6DSbMODg3
ಸುಪ್ರೀಂ ಕೋರ್ಟ್ ಹೇಳಿದ್ದೇನು?
“ಈಗ ನೀವು ಶರದ್ ಪವಾರ್ ಅವರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಹೊಂದಿರುವುದರಿಂದ ನಿಮ್ಮ ಕಾಲ ಮೇಲೆ ನಿಲ್ಲಲು ಕಲಿಯಿರಿ. ಒಮ್ಮೆ ನೀವು ಶರದ್ ಪವಾರ್ ಅವರಿಂದ ದೂರವಾದ ನಂತರ, ನೀವು ಅವರ ಹೆಸರು, ಫೋಟೊ ಅಥವಾ ವಿಡಿಯೊವನ್ನು ಬಳಸಬಾರದು” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ʼʼಯಾರಿಗೆ ಮತ ಚಲಾಯಿಸಬೇಕು ಎಂದು ತಿಳಿದಿರುವ ಮತದಾರರ ಬುದ್ಧಿವಂತಿಕೆಯಲ್ಲಿ ಸಂಪೂರ್ಣ ನಂಬಿಕೆ ಇದೆʼʼ ಎಂದ ಸುಪ್ರೀಂ ಕೋರ್ಟ್ ಈ ವಿಚಾರಣೆಯನ್ನು ನ. 19ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಮಹಾರಾಷ್ಟ್ರ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವುದರಿಂದ ಎರಡೂ ಬಣಗಳು ಚುನಾವಣೆಯತ್ತ ಗಮನ ಹರಿಸಬೇಕು ಎಂದು ತಿಳಿಸಿದೆ.
ಶರದ್ ಪವಾರ್ ಅವರ ಎನ್‌ಸಿಪಿಯನ್ನು ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು. ಹಿರಿಯ ರಾಜಕಾರಣಿ ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಇನ್ನೂ ತಮ್ಮ ಚಿಕ್ಕಪ್ಪನ ಫೋಟೊವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅಜಿತ್ ಪವಾರ್ ಅವರ ಎನ್‌ಸಿಪಿ ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಪಾಲಿಸುತ್ತಿಲ್ಲ ಎಂದು ಸಿಂಘ್ವಿ ಪ್ರತಿಪಾದಿಸಿದರು.
ಕೆಲವು ದಿನಗಳ ಹಿಂದೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP) ಗಡಿಯಾರ (Clock) ಚಿಹ್ನೆಯನ್ನುಅಜಿತ್ ಪವಾರ್ (Ajit Pawar) ಬಣ ಬಳಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಕೋರ್ಟಿನ ಈ ತೀರ್ಪಿನಿಂದಾಗಿ ಹಿರಿಯ ನಾಯಕ ಶರದ್ ಪವಾರ್ ಬಣಕ್ಕೆ ಹಿನ್ನಡೆಯಾಗಿತ್ತು. ಮಹಾರಾಷ್ಟ್ರದಲ್ಲಿ ಒಟ್ಟು 288 ಸೀಟುಗಳಿದ್ದು, ಒಂದೇ ಹಂತದಲ್ಲಿ ನ. 20ರಂದು ಮತದಾನ ನಡೆಯಲಿದೆ. ನ. 23ರಂದು ಫಲಿತಾಂಶ ಪ್ರಕಟವಾಗಲಿದೆ. 2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 105 ಸ್ಥಾನಗಳನ್ನು ಗೆದ್ದರೆ, ಶಿವಸೇನೆ 56 ಮತ್ತು ಕಾಂಗ್ರೆಸ್ 44 ಸ್ಥಾನಗಳನ್ನು ಗಳಿಸಿತ್ತು. 2014ರಲ್ಲಿ ಬಿಜೆಪಿ 122, ಶಿವಸೇನೆ 63 ಮತ್ತು ಕಾಂಗ್ರೆಸ್ 42 ಕಡೆ ಜಯ ಗಳಿಸಿದ್ದವು.
ಈ ಸುದ್ದಿಯನ್ನೂ ಓದಿ: Zeeshan Siddique: ಬಾಬಾ ಸಿದ್ದಿಕಿ ಪುತ್ರ ಅಜಿತ್ ಪವಾರ್ ನೇತೃತ್ವದ NCPಗೆ ಸೇರ್ಪಡೆ