Monday, 14th October 2024

Vinayakan: ಏರ್‌ಪೋರ್ಟ್‌ ಸಿಬ್ಬಂದಿ ಮೇಲೆ ಹಲ್ಲೆ‌ ಮಾಡಿದ ʼವಿಲನ್‌ʼ ವಿನಾಯಕನ್ ಬಂಧನ

vinayakan

ಹೈದರಾಬಾದ್:‌ ತಮಿಳಿನ ರಜನಿಕಾಂತ್‌ ಅಭಿನಯದ ‘ಜೈಲರ್’ ಸಿನಿಮಾದ (Jailor Movie) ವಿಲನ್ (Villain) ಆಗಿ ಖ್ಯಾತಿ ಗಳಿಸಿದ್ದ ಮಲಯಾಳಂನ ನಟ ವಿನಾಯಕನ್ (Vinayakan) ಅವರನ್ನು ಹೈದರಾಬಾದ್​ನಲ್ಲಿ ಬಂಧಿಸಲಾಗಿದೆ. ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿಯ ಮೇಲೆ ಹಲ್ಲೆ (Assault case) ಮಾಡಿದ ಹಿನ್ನೆಲೆಯಲ್ಲಿ ವಿನಾಯಕನ್ ಅವರನ್ನು ಏರ್​ಪೋರ್ಟ್ ಪೊಲೀಸರು ಬಂಧಿಸಿದ್ದಾರೆ.

ಏರ್​ಪೋರ್ಟ್​ ಭದ್ರತೆ ಸಿಬ್ಬಂದಿ (ಸಿಐಎಸ್​ಎಫ್) ನೀಡಿರುವ ದೂರಿನ ಆಧಾರದ ಮೇಲೆ ಎಫ್​ಐಆರ್ ಸಹ ದಾಖಲಾಗಿದೆ. ಗೋವಾಕ್ಕೆ ಹೋಗುತ್ತಿದ್ದ ವಿನಾಯಕನ್, ಕನೆಕ್ಟಿಂಗ್ ಫ್ಲೈಟ್​ ಹತ್ತಲೆಂದು ಹೈದರಾಬಾದ್​ನಲ್ಲಿ ಇಳಿದಾಗ ವಿಮಾನ ನಿಲ್ದಾಣದ ಸಿಐಎಸ್​ಎಫ್ ಸಿಬ್ಬಂದಿ ಒಬ್ಬರೊಟ್ಟಿಗೆ ಜಗಳ ಮಾಡಿಕೊಂಡಿದ್ದು, ಹಲ್ಲೆ ಸಹ ಮಾಡಿದ್ದಾರೆ ಎಂದು ಏರ್​ಪೋರ್ಟ್​ ಭದ್ರತೆ ಸಿಬ್ಬಂದಿ ಆರೋಪ ಮಾಡಿದ್ದಾರೆ. ಆದರೆ, ಸಿಐಎಸ್​ಎಫ್ ಸಿಬ್ಬಂದಿಯೇ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ವಿನಾಯಕನ್‌ ದೂರಿದ್ದಾರೆ.

ಮನೋರಮಾ ಪತ್ರಿಕೆಗೆ ವಿನಾಯಕನ್ ನೀಡಿರುವ ಹೇಳಿಕೆಯಂತೆ, ಅವರು ಗೋವಾಕ್ಕೆ ತೆರಳುತ್ತಿದ್ದಾಗ ಹೈದರಾಬಾದ್​ನಲ್ಲಿ ಇಳಿದಿದ್ದಾರೆ. ಸಿಐಎಸ್​ಎಫ್ ಸಿಬ್ಬಂದಿ ಕೆಲವರು ಅವರನ್ನು ಒಂದು ಕೋಣೆಗೆ ಕರೆದುಕೊಂಡು ಹೋಗಿ ಹಿಗ್ಗಾ-ಮುಗ್ಗ ಥಳಿಸಿದರಂತೆ. ಸಣ್ಣ ವಿಷಯಕ್ಕೆ ಭದ್ರತಾ ಸಿಬ್ಬಂದಿ ಜೊತೆಗೆ ವಿನಾಯಕನ್ ಜಗಳ ಮಾಡಿದ್ದಕ್ಕೆ ತಮಗೆ ಹೀಗೆ ಥಳಿಸಿದ್ದಾರೆಂದು ಅವರು ಹೇಳಿಕೊಂಡಿದ್ದಾರೆ. ‘ನಾನು ಯಾವುದೇ ತಪ್ಪು ಮಾಡಿಲ್ಲ. ಬೇಕಿದ್ದರೆ ಸಾಕ್ಷ್ಯವಾಗಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಬಹುದು’ ಎಂದು ವಿನಾಯಕನ್ ಹೇಳಿದ್ದಾಗಿ ಮನೋರಮಾ ವರದಿ ಮಾಡಿದೆ.

ಕಳೆದ ವರ್ಷ ಸಹ ವಿನಾಯಕನ್ ಅನ್ನು ಬಂಧಿಸಲಾಗಿತ್ತು. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ತಮ್ಮ ಸಂಬಂಧಿಯ ಪತ್ನಿಯೊಟ್ಟಿಗೆ ಜಗಳ ಮಾಡಿಕೊಂಡಿದ್ದಕ್ಕೆ ದೂರು ದಾಖಲಾಗಿತ್ತು. ಎರ್ನಾಕುಲಂ ಪೊಲೀಸ್ ಠಾಣೆಗೆ ಹೋಗಿದ್ದ ವಿನಾಯಕನ್ ಅನ್ನು ಸಿಬ್ಬಂದಿ ಬಂಧಿಸಿದ್ದರು. ಪೊಲೀಸ್ ಠಾಣೆಯಲ್ಲಿ ವಿನಾಯಕನ್ ಗಲಾಟೆ ಮಾಡಿದ್ದಾರೆ ಎಂದು ವಿನಾಯಕನ್ ಅನ್ನು ಬಂಧಿಸಲಾಗಿತ್ತು.

ವಿನಾಯಕನ್, ಮಲಯಾಳಂ ಚಿತ್ರರಂಗದ ಜನಪ್ರಿಯ ನಟ. ಮಲಯಾಳಂನ ಹಲವಾರು ಸಿನಿಮಾಗಳಲ್ಲಿ ಹಲವು ರೀತಿಯ ಪಾತ್ರಗಳಲ್ಲಿ ವಿನಾಯಕನ್ ನಟಿಸಿದ್ದಾರೆ. ಮಲಯಾಳಂ ಮಾತ್ರವೇ ಅಲ್ಲದೆ ತಮಿಳಿನ ಕೆಲವು ಸೂಪರ್ ಹಿಟ್ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕಳೆದ ವರ್ಷ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆದ ರಜನೀಕಾಂತ್​ರ ‘ಜೈಲರ್’ ಸಿನಿಮಾನಲ್ಲಿಯೂ ಸಹ ವಿನಾಯಕನ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ.

ಈ ಸುದ್ದಿ ಓದಿ: ಜೈಲರ್​ ಚಿತ್ರದ ಖಳನಾಯಕ ವಿನಾಯಕನ್ ಬಂಧನ