Saturday, 23rd November 2024

ಭೌತವಿಜ್ಞಾನಿ ಪ್ರೊ.ತನು ಪದ್ಮನಾಭನ್ ನಿಧನ

ಪುಣೆ: ವಿಶ್ವ ಪ್ರಸಿದ್ಧ ಭೌತವಿಜ್ಞಾನಿ ಪ್ರೊ. ತನು ಪದ್ಮನಾಭನ್(64) ಶುಕ್ರವಾರ ಪುಣೆಯ ತಮ್ಮ ನಿವಾಸದಲ್ಲಿ ಬೆಳಗ್ಗೆ ತೀವ್ರ ಹೃದಯಾಘಾತಕ್ಕೀಡಾಗಿ ನಿಧನರಾದರು. ಅವರು ಪತ್ನಿ ಡಾ ವಸಂತಿ ಪದ್ಮನಾಭನ್ ಮತ್ತು ಪುತ್ರಿ ಹಂಸ ಅವರನ್ನು ಅಗಲಿದ್ದಾರೆ.

ಕೇರಳದ ತಿರುವನಂತಪುರದಲ್ಲಿ 1957ರ ಮಾರ್ಚ್ 10ರಂದು ಜನಿಸಿದ್ದ ಪದ್ಮಶ್ರೀ ಪುರಸ್ಕೃತ, ಪದ್ಮನಾಭನ್ ಅವರು ವಿಜ್ಞಾನದ ಬಗ್ಗೆ ಹಲವು ಲೇಖನಗಳನ್ನು ಬರೆದಿದ್ದರು. ಪುಣೆಯ ಇಂಟರ್ ಯುನಿವರ್ಸಿಟಿ ಸೆಂಟರ್ ನಲ್ಲಿ ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರದಲ್ಲಿ ಪ್ರೊಫೆಸರ್ ಆಗಿದ್ದ ಪದ್ಮನಾಭನ್, ಕಳೆದ ತಿಂಗಳು ಕೇರಳ ಶಾಸ್ತ್ರ ಪುರಸ್ಕಾರಕ್ಕೆ ಒಳಗಾಗಿದ್ದರು.

ಪ್ರೊ.ಪದ್ಮನಾಭನ್ ಅವರು 20 ವರ್ಷದವರಾಗಿದ್ದಾಗ ತಮ್ಮ ಮೊದಲ ಸಂಶೋಧನಾ ಪತ್ರಿಕೆಯನ್ನು ಜನರಲ್ ರಿಲೇಟಿವಿಟಿ ಬಗ್ಗೆ ಬರೆದಿದ್ದರು. ಆಗ ಅವರು ಬಿ.ಎಸ್ಸಿ ಪದವಿ ವಿದ್ಯಾರ್ಥಿ.1979ರಲ್ಲಿ ಕೇರಳದ ಯುನಿವರ್ಸಿಟಿ ಕಾಲೇಜಿನಲ್ಲಿ ಎಂ.ಎಸ್ಸಿ ಮುಗಿಸಿದ್ದರು. ಎರಡೂ ಪದವಿಗಳಲ್ಲಿ ಚಿನ್ನದ ಪದಕ ಗಳಿಸಿದ್ದರು.

ಕ್ವಾಂಟಮ್ ಸಿದ್ಧಾಂತ, ಗುರುತ್ವಾಕರ್ಷಣೆ, ವಿಶ್ವವಿಜ್ಞಾನ ಮತ್ತು ವಿಶ್ವದಲ್ಲಿ ರಚನೆ ಇತ್ಯಾದಿಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದರು. ವಿದ್ವಾಂಸ, ಸಂವಹನಕಾರ, ಅಸಾಧಾರಣ ವಿಜ್ಞಾನಿಯಾಗಿದ್ದ ಪದ್ಮನಾಭನ್ ಉತ್ತಮ ಸ್ನೇಹಿತ ಕೂಡ ಎಂದು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ ವಿಜಯ್ ರಾಘವನ್ ಸ್ಮರಿಸಿಕೊಂಡಿದ್ದಾರೆ.