ನವೆದೆಹಲಿ: ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಪುನರುಚ್ಛರಿಸಿದ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಈ ಪರಿಕಲ್ಪನೆಯನ್ನು ‘ಅಸಾಧ್ಯ’ ಎಂದು ತಳ್ಳಿಹಾಕಿದ್ದಾರೆ. ಏಕತಾ ದಿವಸ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಇಂದು ಅಹಮದಾಬಾದ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶೀಘ್ರದಲ್ಲೇ ಏಕಕಾಲಿಕ ಚುನಾವಣೆಯನ್ನು ಜಾರಿಗೊಳಿಸುವುದಾಗಿ ಹೇಳಿಕೆ ನೀಡಿದ್ದಾರೆ.
ಇದರ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ಒಂದು ರಾಷ್ಟ್ರ, ಒಂದು ಚುನಾವಣೆಗಾಗಿ ಪ್ರಧಾನಿಯವರು ಸಂಸತ್ತಿನಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಅದು ‘ಅಸಾಧ್ಯ’ ಎಂದು ಪ್ರತಿಪಾದಿಸಿದರು. ಪ್ರಧಾನಿ ಮೋದಿ ಏನು ಹೇಳಿದ್ದಾರೋ ಅದನ್ನು ಮಾಡುವುದಿಲ್ಲ. ಏಕೆಂದರೆ ಸಂಸತ್ತಿನಲ್ಲಿ ಏಕಕಾಲಿಕ ಚುನಾವಣೆ ವಿಚಾರ ಬಂದಾಗ, ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಆಗ ಮಾತ್ರ ಇದು ಸಂಭವಿಸುತ್ತದೆ. ಇದು ಅಸಾಧ್ಯ. ಒಂದು ರಾಷ್ಟ್ರ, ಒಂದು ಚುನಾವಣೆ ಅಸಾಧ್ಯ,” ಎಂದು ಪುನರುಚ್ಛರಿಸಿದ್ದಾರೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 149ನೇ ಜನ್ಮದಿನದ ಅಂಗವಾಗಿ ಗುಜರಾತ್‌ನ ಏಕತಾ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಗುರುವಾರ ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅವರು, ಶೀಘ್ರದಲ್ಲೇ ಒಂದು ದೇಶ, ಒಂದು ಎಲೆಕ್ಷನ್ ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಘೋಷಿಸಿದ್ದಾರೆ.
ಒನ್ ನೇಷನ್, ಒನ್ ಎಲೆಕ್ಷನ್’ ಕನಸು ಶೀಘ್ರದಲ್ಲೇ ನನಸಾಗಲಿದೆ ಎಂದಿರುವ ಪ್ರಧಾನಿ ಮೋದಿ, ದೇಶದ ಎಲ್ಲಾ ಚುನಾವಣೆಗಳನ್ನು ಒಂದೇ ದಿನದಲ್ಲಿ ಅಥವಾ ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ನಡೆಸುವ ಗುರಿಯನ್ನು ಹೊಂದಿರುವ ಕೇಂದ್ರದ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿದೆ ಮತ್ತು ಅದು ನಿಜವಾಗಲಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು.
ಈ ಪ್ರಸ್ತಾವನೆಯನ್ನು ಈ ವರ್ಷದ ಆರಂಭದಲ್ಲಿ ಕ್ಯಾಬಿನೆಟ್ ಅಂಗೀಕರಿಸಿತು ಮತ್ತು ಈ ವರ್ಷದ ನಂತರ ಸಂಸತ್ತಿನ ಚಳಿಗಾಲದ ಅಧಿವೇಶನದ ಮುಂದೆ ಮಂಡಿಸಲಾಗುವುದು. ನಾವು ಈಗ ‘ಒಂದು ರಾಷ್ಟ್ರ ಒಂದು ಚುನಾವಣೆ’ ನೀತಿ ಬಗ್ಗೆ ಕೆಲಸ ಮಾಡುತ್ತಿದ್ದೇವೆ, ಇದು ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಭಾರತದ ಸಂಪನ್ಮೂಲಗಳ ಅತ್ಯುತ್ತಮ ಫಲಿತಾಂಶವನ್ನು ನೀಡುತ್ತದೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ಸಾಧಿಸುವಲ್ಲಿ ದೇಶವು ಹೊಸ ವೇಗವನ್ನು ಪಡೆಯುತ್ತದೆ. ಇನ್ನು ಏಕರೂಪ ನಾಗರಿಕ ಸಂಹಿತೆಯನ್ನೂ ಶೀಘ್ರದಲ್ಲೇ ಜಾರಿಗೊಳಿಸುತ್ತೇವೆ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: PM Narendra Modi: ಶೀಘ್ರದಲ್ಲೇ ಒಂದು ದೇಶ, ಒಂದು ಎಲೆಕ್ಷನ್ ಮತ್ತು ಏಕರೂಪ ನಾಗರಿಕ ಸಂಹಿತೆ ಜಾರಿ-ಪ್ರಧಾನಿ ಮೋದಿ ಘೋಷಣೆ