Tuesday, 10th September 2024

Mamata Banerjee: ಅಪರಾಜಿತ ಮಸೂದೆ ಜಾರಿ; ಅತ್ಯಾಚಾರಿಗಳ ವಿರುದ್ಧ ದೀದಿ ದಿಟ್ಟ ನಡೆ

Mamata banerjee

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಟ್ರೈನಿ ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣ(Kolkata rape Murder case) ದೇಶಾದ್ಯಂತ ಗಮನ ಸೆಳೆದಿರುವ ಬೆನ್ನಲ್ಲೇ ಮಮತಾ ಬ್ಯಾನರ್ಜಿ(Mamata Banerjee) ಸರ್ಕಾರ ಇಂದು ಅತ್ಯಾಚಾರ ಪ್ರಕರಣಗಳ ವಿರುದ್ಧ ಅಪರಾಜಿತ ಎಂಬ ಮಸೂದೆ(Aparajita Bill)ಯನ್ನು ಮಂಡಿಸಿದ್ದಾರೆ. ಇನ್ನು ಈ ಮಸೂದೆ ಅಂಗೀಕಾರಗೊಂಡಿದ್ದು, ಇದು ಅತ್ಯಾಚಾರ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಾದ ನಿಬಂಧನೆಗಳನ್ನು ಒಳಗೊಳ್ಳಲಿದೆ.

ಇನ್ನು ಈ ವೇಳೆ ಭಾವನಾತ್ಮಕವಾಗಿ ಮಾತನಾಡಿದ ಮಮತಾ ಬ್ಯಾನರ್ಜಿ, ಅಪರಾಜಿತಾ ಮಹಿಳೆ ಮತ್ತು ಮಕ್ಕಳ ರಕ್ಷಣಾ ಮಸೂದೆ(ತಿದ್ದುಪಡಿ) 2024, ಸರ್ಕಾರದ ಐತಿಹಾಸಿಕ ನಡೆಯಾಗಿದೆ. ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಹೊಸ ನಿಬಂಧನೆಗಳನ್ನು ಪರಿಷ್ಕರಿಸುವ ಮತ್ತು ಪರಿಚಯಿಸುವ ಮೂಲಕ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯನ್ನು ಬಲಪಡಿಸುವ ಉದ್ದೇಶವನ್ನು ಮಸೂದೆ ಹೊಂದಿದೆ.

ಅತ್ಯಾಚಾರವು ಮಾನವೀಯತೆಗೆ ವಿರುದ್ಧದ ಶಾಪ ಮತ್ತು ಅಂತಹ ಅಪರಾಧಗಳನ್ನು ತಡೆಯಲು ಅಗತ್ಯವಿರುವ ಸಾಮಾಜಿಕ ಸುಧಾರಣೆಗಳು ಅತ್ಯಗತ್ಯ. ಅಪರಾಜಿತಾ ಮಸೂದೆಗೆ ಪ್ರತಿಪಕ್ಷಗಳು ಮತ್ತು ರಾಜ್ಯಪಾಲರು ಸಹಿ ಹಾಕಿದ ನಂತರ ಅದನ್ನು ಸೂಕ್ತ ರೀತಿಯಲ್ಲಿ ಜಾರಿಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಅದನ್ನು ಮಾಡೇ ಮಾಡುತ್ತೇವೆ ಎಂದು ಹೇಳಿದರು.

 ಪ್ರಧಾನಿ ಮೋದಿ ರಾಜೀನಾಮೆಗೆ ಆಗ್ರಹ

ಇದೇ ವೇಳೆ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಅಲ್ಲದೇ ಪ್ರಧಾನಿ ಮೋದಿ ರಾಜೀನಾಮೆಗೆ ಒತ್ತಾಯಿಸಿದರು. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಘಟನೆಗಳು ದಿನೇ ದಿನೆ ಹೆಚ್ಚುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯಗಳ ಮುಖ್ಯಮಂತ್ರಿಗಳು – ಮಹಿಳೆಯರ ರಕ್ಷಣೆಗಾಗಿ ಪರಿಣಾಮಕಾರಿ ಕಾನೂನುಗಳನ್ನು ಜಾರಿಗೊಳಿಸಲು ವಿಫಲರಾಗಿದ್ದಾರೆ. ಹೀಗಾಗಿ ಅವರೆಲ್ಲರೂ ಅವರವರ ಹುದ್ದೆಯಲ್ಲಿ ಮುಂದುವರೆಯವುದು ಸರಿಯಲ್ಲ. ಅವರು ರಾಜೀನಾಮೆ ನೀಡಲೇಬೇಕು ಎಂದು ಒತ್ತಾಯಿಸಿದರು.

ಮಸೂದೆಗೆ ಅವಿರೋಧ ಬೆಂಬಲ

ಪ್ರತಿಪಕ್ಷಗಳು ಈ ಸಂಪೂರ್ಣ ಬೆಂಬಲ ನೀಡಿದ ನಂತರ ಪಶ್ಚಿಮ ಬಂಗಾಳ ವಿಧಾನಸಭೆಯು ಅತ್ಯಾಚಾರ-ವಿರೋಧಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿತು. ಆದಾಗ್ಯೂ, ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮಂಡಿಸಿದ ಮಸೂದೆಗೆ ಪ್ರಸ್ತಾವಿತ ತಿದ್ದುಪಡಿಗಳನ್ನು ಸದನವು ಅಂಗೀಕರಿಸಲಿಲ್ಲ. ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ಸಾವನ್ನಪ್ಪಿದರೆ ಅಪರಾಧಿಗೆ ಮರಣದಂಡನೆ ವಿಧಿಸುವ ಅವಕಾಶವನ್ನು ಮಸೂದೆಯಲ್ಲಿ ಕಲ್ಪಸಲಾಗಿದೆ.

ಕೋಲ್ಕೊತಾದ ಆರ್‌ಜಿ  ಕಾರ್ ಆಸ್ಪತ್ರೆಯ ಮಾಜಿ ಪ್ರಿನ್ಸಿಪಾಲ್‌  ಸಂದೀಪ್ ಘೋಷ್ ಅವರನ್ನುನಿನ್ನೆ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (CBI)ಬಂಧಿಸಿತ್ತು. ವೈದ್ಯೆ ಕೊಲೆ ಪ್ರಕರಣದಲ್ಲೂ ಈತನ ಕೈವಾಡ ಇದೆ. ಘೋಷ್ ಅವರ ಅಧಿಕಾರಾವಧಿಯಲ್ಲಿ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ಎಫ್‌ಐಆರ್‌ನಲ್ಲಿ ಘೋಷ್‌ ಅವರ ಹೆಸರು ದಾಖಲಾಗಿತ್ತು.ಅದಾಗಿ ಕೆಲವು ದಿನಗಳ ನಂತರ ಈ ಬಂಧನ ನಡೆದಿದೆ.

ಆಗಸ್ಟ್ 9 ರಂದು ಆರ್‌ಜಿ  ಕಾರ್ ಆಸ್ಪತ್ರೆಯ ಸ್ನಾತಕೋತ್ತರ ತರಬೇತಿ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಘೋಷ್ ಅವರನ್ನು ಸಿಬಿಐನ ಸಾಲ್ಟ್ ಲೇಕ್ ಕಚೇರಿಯಲ್ಲಿ 15 ನೇ ದಿನವೂ ಪ್ರಶ್ನಿಸಲಾಗಿತ್ತು. ನಂತರ  ಸಿಬಿಐನ ಭ್ರಷ್ಟಾಚಾರ ವಿರೋಧಿ ವಿಭಾಗವನ್ನು ಹೊಂದಿರುವ ಕೋಲ್ಕತ್ತಾದ ನಿಜಾಮ್ ಪ್ಯಾಲೇಸ್ ಕಚೇರಿಗೆ ಕರೆದೊಯ್ದು  ಅವರನ್ನು ಬಂಧಿಸಲಾಗಿದೆ ಎಂದು ಪ್ರಕಟಿಸಿದೆ.

ಈ ಸುದ್ದಿಯನ್ನೂ ಓದಿ: ಕೋಲ್ಕತ್ತಾ ವೈದ್ಯೆ ಪ್ರಕರಣ: ಸುಪ್ರೀಂನಿಂದ ಆ.20ರಂದು ಸ್ವಯಂಪ್ರೇರಿತ ವಿಚಾರಣೆ

Leave a Reply

Your email address will not be published. Required fields are marked *