Saturday, 14th December 2024

ಹಜ್ರಾ ರೋಡ್ ಶೋನಲ್ಲಿ ಗಾಲಿಕುರ್ಚಿಯಲ್ಲೇ ದೀದಿ ಚುನಾವಣಾ ಪ್ರಚಾರ

ಕೋಲ್ಕತ್ತಾ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ನಂತರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಹಜ್ರಾದಲ್ಲಿ ನಡೆಯಲಿರುವ ರೋಡ್ ಶೋನಲ್ಲಿ ಗಾಲಿಕುರ್ಚಿಯಲ್ಲೇ ಕುಳಿತು ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ಪಕ್ಷದ ಮೂಲ ಗಳು ತಿಳಿಸಿವೆ.

ಮಾ.27 ರಿಂದ ಪಶ್ಚಿಮ ಬಂಗಾಳ ಚುನಾವಣೆ ಎಂಟು ಹಂತಗಳಲ್ಲಿ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ನಡೆಯಲಿದೆ.

ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವು ಇಂದು ನಿಗದಿಪಡಿಸಿದ್ದ ಚುನಾವಣಾ ಪ್ರಣಾಳಿಕೆ ಬಿಡುಗಡೆಯನ್ನು ರದ್ದುಗೊಳಿಸಿದ್ದು, ನಂದಿಗ್ರಾಮ್‍ನಲ್ಲಿ ಮಮತಾ ಬ್ಯಾನರ್ಜಿ ಮೇಲೆ ನಡೆದ ಹಲ್ಲೆಯಿಂದಾಗಿ ಟಿಎಂಸಿ ತನ್ನ ಪ್ರಣಾಳಿಕೆ ಬಿಡುಗಡೆಯನ್ನು ಮುಂದೂಡಿದೆ.

ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಮತಾ ಅವರು ಭಾನುವಾರ ಮಧ್ಯಾಹ್ನ ರೋಡ್ ಶೋ ನಡೆಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಹಲ್ಲೆಯಿಂದಾಗಿ ಮುಖ್ಯಮಂತ್ರಿಯವರ ಎಡಗಾಲಿಗೆ ತೀವ್ರ ಪೆಟ್ಟಾಗಿದ್ದು ಪ್ಲಾಸ್ಟರ್ ಹಾಕಲಾಗಿದೆ. ಈಗ ಚೇತರಿಸಿಕೊಂಡಿದ್ದು ಸ್ಥಿರವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.