ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಿಂದಲೇ ಅಖಾಡ ಕ್ಕಿಯುವುದಾಗಿ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಸೋಮವಾರ ಘೋಷಿಸಿದ್ದಾರೆ. ನಂದಿಗ್ರಾಮ ಟಿಎಂಸಿ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ಸುವೇಂದು ಅಧಿಕಾರಿಯ ಭದ್ರಕೋಟೆಯಾಗಿದೆ.
ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದರು. ಕೆಲವರು ಇಲ್ಲಿಂದ ಅಲ್ಲಿಗೆ ವಲಸೆ ಹೋಗಿದ್ದಾರೆ. ನಮ್ಮ ಸ್ಥಳೀಯ ನಾಯಕರ ವಿರುದ್ಧವೇ ಸ್ಪರ್ಧಿಸಬೇಕಾಗಿದೆ. ಈ ಬಗ್ಗೆ ಚಿಂತಿಸಬೇಕಾಗಿಲ್ಲ. ಯಾಕೆಂದರೆ ತೃಣಮೂಲ ಕಾಂಗ್ರೆಸ್ ಸ್ಥಾಪನೆಯಾಗುವಾಗ ಈ ವ್ಯಕ್ತಿಗಳು ಇರಲಿಲ್ಲವಾಗಿತ್ತು. ಇದರಿಂದಾಗಿ ಕೆಲವರು ಪಕ್ಷ ತೊರೆದದ್ದು ಒಳ್ಳೆಯದಾಗಿದೆ ಎಂದು ಹೇಳಿದರು.
ರೈತರ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಬಿಜೆಪಿ ರೈತರನ್ನು ವಂಚಿಸುತ್ತಿದೆ. ನಂದಿಗ್ರಾಮ ಅದಕ್ಕೆ ಸುಗಮ ಹಾದಿ ಮಾಡಿಕೊಟ್ಟಿದ್ದು, ಇಂದು ಪಂಜಾಬ್ ರೈತರು ಕೂಡಾ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ನಾವು ರೈತರ ಜತೆಗಿದ್ದೇವೆ. ಬಿಜೆಪಿ ಮೂರು ಕಾಯ್ದೆಗಳನ್ನು ರದ್ದುಪಡಿಸಲೇಬೇಕು ಎಂದು ತಿಳಿಸಿದರು.
2020ರ ಡಿಸೆಂಬರ್ ನಲ್ಲಿ ಟಿಎಂಸಿ ಪ್ರಭಾವಿ ಮುಖಂಡ, ಸಚಿವ ಸುವೇಂದು ಅಧಿಕಾರಿ ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.