Friday, 22nd November 2024

ಚುನಾವಣೆ ಮುಗಿಯುವುದರೊಳಗೆ ಸ್ವತಃ ಮಮತಾ ಜೈ ಶ್ರೀರಾಮ್ ಜಪಿಸಲಿದ್ದಾರೆ: ಶಾ

ಕೂಚ್ ಬಿಹಾರ್: ‘ಜೈ ಶ್ರೀ ರಾಮ್’ ಘೋಷಣೆ ಕೂಗಿದರೆ ಮಮತಾ ಬ್ಯಾನರ್ಜಿ ಕೋಪ ಮಾಡಿಕೊಳ್ಳುತ್ತಾರೆ, ಆದರೆ ವಿಧಾನಸಭಾ ಚುನಾವಣೆ ಮುಗಿಯುವ ಹೊತ್ತಿಗೆ ಸ್ವತಃ ಅವರೇ ಜೈ ಶ್ರೀರಾಮ್ ಜಪಿಸಲು ಪ್ರಾರಂಭಿಸುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಕೂಚ್‌ಬಿಹಾರ್‌ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಶಾ, ಮುಂಬರುವ ವಿಧಾನಸಭೆ ಚುನಾವಣೆಯೂ ನರೇಂದ್ರ ಮೋದಿ ಸರ್ಕಾರದ “ವಿಕಾಸ್ ಮಾದರಿ” ಮತ್ತು ಮಮತಾ ಬ್ಯಾನರ್ಜಿಯವರ “ವಿನಾಶ್ ಮಾದರಿ” ನಡುವಿನ ಸ್ಪರ್ಧೆಯಾಗಿದೆ ಎಂದರು.

ಮೋದಿ ಸರ್ಕಾರ “ಜನ ಕಲ್ಯಾಣ್ ಗಾಗಿ ಕೆಲಸ ಮಾಡುತ್ತಿದ್ದರೆ, ಮಮತಾ ಬ್ಯಾನರ್ಜಿ ಸರ್ಕಾರ “ಭತಿಜಾ ಕಲ್ಯಾಣ್’ ದ ಬಗ್ಗೆ ಮಾತ್ರ ಚಿಂತಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

“ಜೈ ಶ್ರೀ ರಾಮ್ ಘೋಷಣೆ ಕೂಗುವುದು ಅಪರಾಧ ಎಂಬ ವಾತಾವರಣ ಸೃಷ್ಟಿಸಲಾಗಿದೆ. ಮಮತಾ ದೀದಿ, ಜೈ ಶ್ರೀ ರಾಮ್ ಘೋಷಣೆಗಳನ್ನು ಇಲ್ಲಿ ಕೂಗದೆ ಪಾಕಿಸ್ತಾನದಲ್ಲಿ ಕೂಗಬೇಕೇ?” ಶಾ ಪ್ರಶ್ನಿಸಿದ್ದಾರೆ.

ಬಿಜೆಪಿಯ ‘ಪರಿವರ್ತನ ಯಾತ್ರೆ’ ಒಳನುಸುಳುವಿಕೆಯನ್ನು ಕೊನೆಗೊಳಿಸಿ ಪಶ್ಚಿಮ ಬಂಗಾಳದ ಸ್ಥಿತಿಯನ್ನು ಪರಿವರ್ತಿಸುವು ದಕ್ಕಾಗಿ ಎಂದು ಹೇಳಿದರು.