Friday, 22nd November 2024

Mandya Violence : ನಾಗಮಂಗಲ ಗಲಭೆ ಬಗ್ಗೆ ದಾಖಲೆ ಇದ್ದರೆ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡುವೆ ಎಂದ ಸುಬ್ರಮಣಿಯನ್ ಸ್ವಾಮಿ

Mandya Violence

ಕಾರ್ಕಳ: ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ (Mandya Violence) ಅಹಿತಕರ ಘಟನೆ ಮುಸ್ಲಿಮರು ಮಾಡಿರುವುದು ಹಾಗೂ ಈ ಬಗ್ಗೆ ಸರಕಾರ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಬಗ್ಗೆ ಸೂಕ್ತ ದಾಖಲೆ ನೀಡಿದರೆ ಸುಪ್ರಿಂ ಕೋರ್ಟ್‌ನಲ್ಲಿ ಅರ್ಜಿ ಹೂಡುವುದಾಗಿ ಕೇಂದ್ರದ ಮಾಜಿ ಸಚಿವ, ವಿರಾಟ್‌ ಹಿಂದೂ ಸ್ಥಾನ್‌ ಸಂಗಮದ ರಾಷ್ಟ್ರೀಯ ಅಧ್ಯಕ್ಷ ಡಾ. ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ. ಈ ಕುರಿತು ಸ್ಪಷ್ಟ ದಾಖಲೆ ಇದ್ದರೆ ನ್ಯಾಯಾಲಯದ ಮೊರೆ ಹೋಗುವುದು ಸೂಕ್ತ ಎಂಬುದಾಗಿ ಅವರು ಹೇಳಿದ್ದಾರೆ.

ಮಂಗಳೂರಿನಿಂದ ಶೃಂಗೇರಿಗೆ ತೆರಳುವ ಮಾರ್ಗ ಮಧ್ಯೆ ಕಾರ್ಕಳದ ಪತ್ತೂಂಜಿಕಟ್ಟೆ ಶ್ರೀ ದತ್ತಾತ್ರೇಯ ಮೂಕಾಂಬಿಕಾ ದೇವಸ್ಥಾನಕ್ಕೆ ಸುಬ್ರಮಣಿಯನ್ ಸ್ವಾಮಿ ಭೇಟಿ ನೀಡಿದ್ದರು. ಆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಗಲಭೆ ಕುರಿತು ನ್ಯಾಯಾಲಯದಲ್ಲಿ ಹೋರಾಟ ಮಾಡುವ ಕುರಿತು ತಮ್ಮ ಅಭಿಪ್ರಾಯ ಹೇಳಿದರು.

ರಾಮಸೇತು ಪಾರಂಪರಿಕ ಸ್ಮಾರಕವಾಗಬೇಕು:

ರಾಮಸೇತು ಹಿಂದೂಗಳಿಗೆ ಅತ್ಯಂತ ಭಾವನಾತ್ಮಕ ವಿಷಯ. ಇದನ್ನು ದೇಶದ ಪಾರಂಪರಿಕ ಸ್ಮಾರಕವಾಗಿ ಘೋಷಿಸಲು ಆಗ್ರಹಿವೆ. ಕೇಂದ್ರ ಸರಕಾರ ಇದಕ್ಕೆ ಯಾಕೆ ಹಿಂಜರಿಯುತ್ತಿದೆ ಎನ್ನುವುದು ಗೊತ್ತಿಲ್ಲ ಎಂದು ಹೇಳಿದರು. ವಿರಾಟ್‌ ಹಿಂದೂ ಸಂಗಮದ ಕಾರ್ಯ ಶೈಲಿ ಭಿನ್ನವಾದುದು. ಇದು ಪರಂಪರೆ, ಸಂಸ್ಕೃತಿ ಇತಿಹಾಸ, ಹಿಂದುತ್ವ, ಸಂಸ್ಕೃತದ ಬಗ್ಗೆ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿದ್ದು, ಇದು ರಾಜಕೀಯ ಸಂಘಟನೆ ಅಲ್ಲ ಎಂದರು.

ಇದನ್ನೂ ಓದಿ: Madhya Pradesh : ಈ ಊರಲ್ಲಿ ಹೆಂಡತಿಯೂ ಬಾಡಿಗೆಗೆ ಸಿಕ್ತಾಳೆ; ಇನ್ನೂ ಇದೆ ಅನಿಷ್ಠ ಪದ್ಧತಿ!

ಸರಕಾರ ಹಿಂದೂ ದೇವಾಲಯವನ್ನು ತನ್ನ ವಶಕ್ಕೆ ಪಡೆದಿರುವುದು ಸಂವಿಧಾನ ಬಾಹಿರ. ನಾನು ತಮಿಳುನಾಡಿನಲ್ಲಿ ಕೆಲವು ದೇವಸ್ಥಾನಗಳನ್ನು ಸರಕಾರದ ಅಧೀನದಿಂದ ಬಿಡಿಸಿದ್ದೇನೆ. ಕರ್ನಾಟಕ ಹಾಗೂ ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲೂ ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದೇವೆ ಎಂದವರು ಹೇಳಿದರು.

ಮೋದಿ ಅಧಿಕಾರದ ಅವಧಿ ಅಂತ್ಯ

ಕೇಂದ್ರದಲ್ಲಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಹೆಚ್ಚು ದಿನ ಇರುವುದಿಲ್ಲ. ಅವರು ಅಧಿಕಾರ ಬಿಟ್ಟು ಕೊಡಲೇಬೇಕು. ಬಿಜೆಪಿಯಲ್ಲಿ ಯಾರು ಬೇಕಾದರೂ ಪ್ರಧಾನಿಯಾಗಬಹುದು. ಮುಂದಿನ ಪ್ರಧಾನಿ ಯಾರಾಗುತ್ತಾರೆಂದು ಈಗಲೇ ಹೇಳಿದಲ್ಲಿ ಹೆಸರು ಹಾಳಾಗುತ್ತದೆ ಎಂದರು.