Sunday, 15th December 2024

Mani Shankar Aiyar: ‘ನನ್ನ ರಾಜಕೀಯ ಜೀವನದ ಹುಟ್ಟು- ಸಾವು ಎರಡಕ್ಕೂ ಗಾಂಧಿ ಕುಟುಂಬವೇ ಕಾರಣʼ; ಮಣಿಶಂಕರ್ ಅಯ್ಯರ್ ಮತ್ತೆ ವಿವಾದ

ನವದೆಹಲಿ: ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸುದ್ದಿಯಾಗುವ ಕಾಂಗ್ರೆಸ್‌ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಇದೀಗ ಮತ್ತೊಮ್ಮೆ ವಿವಾದ ಕಿಡಿ ಹಚ್ಚಿದ್ದಾರೆ. ಈ ಬಾರಿ ಅವರು ಸ್ವಪಕ್ಷ ನಾಯಕರ ವಿರುದ್ಧವೇ ಕಿಡಿ ಕಾರಿದ್ದಾರೆ. “ಗಾಂಧಿ ಕುಟುಂಬವು ನನ್ನ ರಾಜಕೀಯ ಬೆಳವಣಿಗೆಗೆ ಮಾತ್ರವಲ್ಲ, ಪಕ್ಷದಿಂದ ನನ್ನನ್ನು ನೇಪಥ್ಯಕ್ಕೆ ಸರಿಸಿ ನನ್ನ ರಾಜಕೀಯದ ಅಂತ್ಯದಲ್ಲೂ ಪ್ರಮುಖ ಪಾತ್ರವಹಿಸಿದೆ. ನನ್ನ ಬದುಕಿನ ವಿಪರ್ಯಾಸವೆಂದರೆ ನನ್ನ ರಾಜಕೀಯ ಜೀವನದ ಹುಟ್ಟಿಗೆ ಮತ್ತು ಅಂತ್ಯಕ್ಕೆ ಗಾಂಧಿ ಕುಟುಂಬ ಕಾರಣವಾಗಿದೆ” ಎಂದು ಕಾಂಗ್ರೆಸ್‌ನ ಹಿರಿಯ ನಾಯಕ(Senior Congress leader) ಮಣಿಶಂಕರ್ ಅಯ್ಯರ್(Mani Shankar Aiyar) ಅವರು ರಾಹುಲ್‌ ಗಾಂಧಿ(Rahul Gandhi) ಮತ್ತು ಗಾಂಧಿ ಕುಟುಂಬದ(Gandhi Family) ಇತರರನ್ನು ಟೀಕಿಸಿದ್ದಾರೆ. 

ಕಾಂಗ್ರೆಸ್‌ ಪಕ್ಷದಲ್ಲಿ ಬಹಳ ವರ್ಷಗಳಿಂದ ಗುರುತಿಸಿಕೊಂಡಿದ್ದ‌ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಗಾಂಧಿ ಕುಟುಂಬದ ಮೇಲಿನ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

“10 ವರ್ಷಗಳಿಂದ ಸೋನಿಯಾ ಗಾಂಧಿ(Sonia Gandhi) ಅವರನ್ನು ಭೇಟಿ ಮಾಡಲು ನನಗೆ ಅವಕಾಶ ನೀಡಿಲ್ಲ. ತುಂಬಾ ಹಿಂದೆ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ಸ್ವಲ್ಪ ಹೊತ್ತು ಔಪಚಾರಿಕವಾಗಿ ಮಾತನಾಡಿದ್ದೆ. ಅಷ್ಟು ಬಿಟ್ಟರೆ ಈವರೆಗೆ ಅವರ ಭೇಟಿಯೂ ಸಾಧ್ಯವಾಗಿಲ್ಲ. ಪ್ರಿಯಾಂಕಾ ಅವರೊಂದಿಗೂ ಸಮಯ ಕಳೆಯಲು ಆಗಿಲ್ಲ. ಪ್ರಿಯಾಂಕಾ ಗಾಂಧಿ ಅವರು ಒಮ್ಮೆ ಕರೆ ಮಾಡಿದ್ದರು ಅಷ್ಟೇ. ಸದ್ಯಕ್ಕೆ ಫೋನ್‌ ಕರೆಯ ಮೂಲಕ ಸಂಪರ್ಕವನ್ನು ಇಟ್ಟುಕೊಳ್ಳಲಾಗಿದೆ” ಎಂದು ಸುದ್ದಿ ಮಾಧ್ಯಮ ನಡೆಸಿದ ಸಂದರ್ಶನದಲ್ಲಿ ಮಣಿಶಂಕರ್‌ ಅಯ್ಯರ್‌ ಮಾತನಾಡಿದ್ದಾರೆ.

ಸಂದರ್ಶನದ ಮಧ್ಯೆ ಒಂದು ಘಟನೆಯನ್ನು ನೆನಪಿಸಿಕೊಂಡ ಅಯ್ಯರ್, ಪಕ್ಷದಿಂದ ಅಮಾನತುಗೊಂಡ ಅವಧಿಯಲ್ಲಿ ರಾಹುಲ್ ಗಾಂಧಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲು ವಯನಾಡ್ ಸಂಸದರೊಬ್ಬರನ್ನು ನಾನು ಅವಲಂಬಿಸಬೇಕಾಯಿತು ಎಂದು ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ. ಹೀಗೊಮ್ಮೆ ರಾಹುಲ್ ಗಾಂಧಿ ನನ್ನೊಂದಿಗೆ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಿಯಾಂಕಾ ಗಾಂಧಿ ಅವರಲ್ಲಿ ಕೇಳಿದೆ. ನಿಮ್ಮನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಆದ್ದರಿಂದ ನೀವು ರಾಹುಲ್‌ ಗಾಂಧಿ ಜೊತೆಗೆ ಮಾತನಾಡಲು ಸಾಧ್ಯವಿಲ್ಲ ಎಂದರು” ಎಂದು ಮಣಿಶಂಕರ್‌ ಹೇಳಿದ್ದಾರೆ.

“ರಾಹುಲ್‌ ಗಾಂಧಿ ಹುಟ್ಟುಹಬ್ಬಕ್ಕೆ ಪತ್ರವೊಂದನ್ನು ಬರೆದು ಶುಭಾಶಯ ಕೋರಿದ್ದೆ. ನನ್ನ ಅಮಾನತುಗೊಳಿಸಿದ್ದಕ್ಕೆ ಸ್ಪಷ್ಟತೆಯನ್ನೂ ಕೇಳಿ ಪತ್ರ ಬರೆದಿದ್ದೆ. ಆದರೆ ಈವರೆಗೂ ಉತ್ತರ ಬಂದಿಲ್ಲ. ಪಕ್ಷಕ್ಕೆ ನಾನು ಬೇಡವಾಗಿದ್ದೇನೆ. ನನ್ನ ರಾಜಕೀಯ ಬದುಕು ಬಹುತೇಕ ಅಂತ್ಯವಾಗಿದೆ” ಎಂದು ತೀರಾ ನೋವಿನಿಂದ ಮಣಿಶಂಕರ್‌ ಮಾತನಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ʼನೀಚ್‌ ಆದ್ಮಿʼ ಎಂದು ಜರಿದ ಕಾರಣಕ್ಕೆ ಕಾಂಗ್ರೆಸ್ ನ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. 2014ರ ಲೋಕಸಭಾ ಚುನಾವಣೆಗೂ ಮುನ್ನ ನರೇಂದ್ರ ಮೋದಿಯನ್ನು ‘ಚಾಯ್’ವಾಲಾ’ ಎಂದು ಕರೆಯುವ ಮೂಲಕವೂ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಸಾಕಷ್ಟು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ ಮುಜುಗರ ತರುತ್ತಿದ್ದ ಕಾರಣಕ್ಕೆ ಕಳೆದ ಕೆಲವು ವರ್ಷಗಳಿಂದ ಮಣಿಶಂಕರ್‌ ಅಯ್ಯರ್‌ ಅವರನ್ನು ಅಮಾನತುಗೊಳಿಸಲಾಗಿದೆ ಎಂಬ ಮಾಹಿತಿಯಿದೆ.

ಈ ಸುದ್ದಿಯನ್ನೂ ಓದಿ:Maharashtra Cabinet: ಇಂದು ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ- ಸಿಎಂ ಫಡ್ನವೀಸ್ ಮೆಗಾ ರೋಡ್‌ ಶೋ