Saturday, 16th November 2024

Manipur Horror: ಶಂಕಿತ ಕುಕಿ ಬಂಡುಕೋರರು ಅಪಹರಿಸಿದ್ದ 6 ಮಂದಿಯ ಮೃತದೇಹ ಪತ್ತೆ

Manipur Horror

ಇಂಫಾಲ: ಮಣಿಪುರದ ಜಿರಿಬಾಮ್ (Manipur’s Jiribam) ಜಿಲ್ಲೆಯಿಂದ ಶಂಕಿತ ಕುಕಿ ಬಂಡುಕೋರರು ಅಪಹರಿಸಿದ ಮೈತೈ ಸಮುದಾಯದ 6 ಮಂದಿಯ ಮೃತದೇಹ ಪತ್ತೆಯಾಗಿದೆ. ಮೃತರ ಪೈಕಿ 8 ತಿಂಗಳ ಮಗೂವೂ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಣಿಪುರದ ಸಮೀಪ ರಾಜ್ಯವಾದ ಅಸ್ಸಾಂನಲ್ಲಿ ಈ ಮೃತದೇಹ ಕಂಡು ಬಂದಿದೆ (Manipur Horror).

ಜಿರಿಬಾಮ್‌ನಲ್ಲಿ ಸೂಕ್ತ ಮೂಲ ಸೌಕರ್ಯವಿಲ್ಲದ ಕಾರಣ ನ. 15ರಂದು ಪತ್ತೆಯಾದ ಇಬ್ಬರು ಮಕ್ಕಳು ಮತ್ತು ಓರ್ವ ಮಹಿಳೆ ಸೇರಿದಂತೆ 3 ಮೃತದೇಹಗಳನ್ನು ಗುರುತು ಪತ್ತೆಗಾಗಿ 50 ಕಿ.ಮೀ. ದೂರದಲ್ಲಿರುವ ಅಸ್ಸಾಂನ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (SMHC) ಸಾಗಿಸಲಾಗಿದೆ. ಮೃತದೇಹಗಳು ಕೊಳೆತ ಸ್ಥಿತಿಯಲ್ಲಿರುವುದರಿಂದ ಗುರುತು ಪತ್ತೆಯೇ ಸವಾಲಾಗಿ ಪರಿಣಮಿಸಿದೆ. ಶನಿವಾರ ಅಪರಾಹ್ನ ಮತ್ತೆ 3 ಮೃತದೇಹವೂ ಪತ್ತೆಯಾಗಿದ ಎಂದು ಅಧಿಕಾರಿಗಳು ತಿಳಿಸಿದ್ದು, ಈ ಮೂಲಕ 6 ಮಂದಿಯ ಶವ ಸಿಕ್ಕಂತಾಗಿದೆ. ಇವರ ಗುರುತೂ ಪತ್ತೆಯಾಗಿಲ್ಲ. ಈ ಮೃತದೇಹವನ್ನೂ ಪರೀಕ್ಷೆಗಾಗಿ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕೊಂಡೊಯ್ಯುವ ಸಾಧ್ಯತೆ ಇದೆ.

ಅಪಹೃತರ ಪೈಕಿ ತಮ್ಮ ಮಕ್ಕಳು, ಪತ್ನಿ, ಅತ್ತೆ ಮತ್ತು ಪತ್ನಿಯ ಸಹೋದರಿ ಇದ್ದಾರೆ ಎಂದು ರಾಜ್ಯ ಸರ್ಕಾರದ ಉದ್ಯೋಗಿ ಲೈಶಾರಾಮ್ ಹೆರೋಜಿತ್ ಶನಿವಾರ ಬೆಳಗ್ಗೆ ಎನ್‌ಡಿಟಿವಿಗೆ ತಿಳಿಸಿದ್ದರು. ನ. 11ರಂದು ಕುಕಿ ಬಂಡುಕೋರರು ಮತ್ತು ಸಿಆರ್‌ಪಿಎಫ್‌ ಯೋಧರ ಮಧ್ಯೆ ಎನ್‌ಕೌಂಟರ್‌ ನಡೆಯುತ್ತಿದ್ದ ವೇಳೆ ಶಂಕಿತ ಕುಕಿ ಉಗ್ರರು 6 ಮಂದಿಯನ್ನು ಅಪಹರಿಸಿದ್ದರು. ಅಂದು ನಡೆದ ಎನ್‌ಕೌಂಟರ್‌ನಲ್ಲಿ 10 ಮಂದಿ ಬಂಡುಕೋರರು ಹತರಾಗಿದ್ದರು.

ಬುಧವಾರ (ನ. 13) ಮಾಧ್ಯಮದೊಂದಿಗೆ ಮಾತನಾಡಿದ ಲೈಶಾರಾಮ್ ಹೆರೋಜಿತ್, ತಮ್ಮ ಪತ್ನಿಯ ಸ್ನೇಹಿತೆಯೊಬ್ಬರು ಶಸ್ತ್ರಸ್ತ್ರಧಾರಿಗಳು 6 ಮಂದಿಯನ್ನು ದೋಣಿಯಲ್ಲಿ ಅಪಹರಿಸುತ್ತಿರುವುದನ್ನು ನೋಡಿದ್ದಾಗಿ ಹೇಳಿದ್ದರು. ಎನ್‌ಕೌಂಟರ್‌ ನಡೆಯುತ್ತಿರುವಾಗ ಪತ್ನಿ ಕಾಲ್‌ ಮಾಡಿದ್ದರಂತೆ. ನೆಟ್‌ವರ್ಕ್‌ ಸಮರ್ಪಕವಾಗಿ ದೊರೆಯದ ಹಿನ್ನೆಲೆಯಲ್ಲಿ ಅವರ ಮಾತು ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲವಂತೆ. ಬಳಿಕ ಕರೆ ಮಾಡಲು ಯತ್ನಿಸಿದಾಗ ಆಕೆಯ ಫೋನ್‌ ಸ್ವಿಚ್‌ ಆಫ್‌ ಆಗಿತ್ತು ಎಂದು ತಿಳಿಸಿದ್ದರು. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ.

ಕುಕಿ ಸಮುದಾಯದವರ ಪ್ರತಿಭಟನೆ

ನ. 11ರಂದು ಕುಕಿ ಬಂಡುಕೋರರು ಹತರಾದ ಬಳಿಕ ಆ ಸಮುದಾಯಕ್ಕೆ ಸೇರಿದ ಹಲವರು ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮುಂಭಾಗ ಗುಂಪಗೂಡಿ ಪ್ರತಿಭಟನೆ ನಡೆಸಿದ್ದರು. ಎನ್‌ಕೌಂಟರ್‌ನಲ್ಲಿ ಮೃತಪಟ್ಟವರೆಲ್ಲ ಗ್ರಾಮದ ಸ್ವಯಂ ಸೇವಕರು ಎನ್ನುವುದು ಅವರ ವಾದ. ಕುಕಿಗಳ ಮೃತದೇಹ ಸಾಗಿಸುತ್ತಿದ್ದ ಪೊಲೀಸ್‌ ವಾಹನವನ್ನು ತಡೆದ ಪ್ರತಿಭಟನಾಕಾರರು ಇದನ್ನು ತಮಗೆ ಒಪ್ಪಿಸಬೇಕೆಂದು ಆಗ್ರಹಿಸಿದ್ದರು.

ಸರ್ಕಾರದ ಮೂಲಗಳು ಮತ್ತು ಪೊಲೀಸರು ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಬಲವಂತದಿಂದ ಅವರನ್ನು ಸ್ಥಳದಿಂದ ಚದುರಿಸಲಾಯಿತು. ಕೊನೆಗೆ ಲಾಠಿ ಚಾರ್ಜ್‌ ನಡೆಸಬೇಕಾಯಿತು. ಸದ್ಯ ಸ್ಥಳದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಅಸ್ಸಾಂ ಪೊಲೀಸರನ್ನು ನಿಯೋಜಿಸಲಾಗಿದೆ.

ಈ ಸುದ್ದಿಯನ್ನೂ ಓದಿ: ಮಣಿಪುರ-ಅಸ್ಸಾಂ ಗಡಿಯಲ್ಲಿ 3 ಮೃತದೇಹ ಪತ್ತೆ; ತೀವ್ರ ನಿಗಾ