Friday, 22nd November 2024

Manipur Unrest: ಮಣಿಪುರ ಜನಾಂಗೀಯ ಘರ್ಷಣೆ ಅಂತ್ಯ; ನಾಳೆ ಕುಕಿ ಹಾಗೂ ಮೈತೈ ಶಾಸಕರ ಶಾಂತಿ ಮಾತುಕತೆ

Manipur Unrest

ನವದೆಹಲಿ: ಸುಮಾರು ಒಂದೂವರೆ ವರ್ಷದ ಹಿಂದೆ ಜನಾಂಗೀಯ ಸಂಘರ್ಷಕ್ಕೆ ಕಾರಣವಾಗಿದ್ದ ಮಣಿಪುರ(Manipur Unrest)ದ ಕುಕಿ ಹಾಗೂ ಮೈತೈ ಸಮುದಾಯದ ಶಾಸಕರು ಇದೀಗ ಮೊದಲ ಬಾರಿಗೆ ಶಾಂತಿ ಮಾತುಕತೆಗೆ ಮುಂದಾಗಿದ್ದಾರೆ. ನಾಳೆ ಎರಡೂ ಸಮುದಾಯದ ಶಾಸಕರು ದೆಹಲಿಯಲ್ಲಿ ಪರಸ್ಪರ ಮಾತುಕತೆ ಮೂಲಕ ಶಾಂತಿಯುತ ಒಪ್ಪಂದಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಗೃಹ ಸಚಿವಾಲಯದ (MHA) ಮೇಲ್ವಿಚಾರಣೆಯ ಮಾತುಕತೆಗಳು ನಾಗಾ ಶಾಸಕರ ಮಧ್ಯಸ್ಥಿಕೆ ವಹಿಸಲಿದೆ.

ನಾಗಾ ಶಾಸಕರು ಕಳೆದ ಹತ್ತು ತಿಂಗಳುಗಳಿಂದ ಕೋಲ್ಕತ್ತಾ ಮತ್ತು ಗುವಾಹಟಿಯಂತಹ ಸ್ಥಳಗಳಲ್ಲಿ ಪ್ರತ್ಯೇಕವಾಗಿ ಮೈತೆ ಮತ್ತು ಕುಕಿ ಶಾಸಕರನ್ನು ಭೇಟಿಯಾಗಿದ್ದಾರೆ. ಆದರೆ ಕುಕಿ ಮತ್ತು ಮೈತೆಯ್ ಶಾಸಕರು ಒಂದೇ ಸೂರಿನಡಿ ಭೇಟಿಯಾಗುತ್ತಿರುವುದು ಇದೇ ಮೊದಲು. ಹಲವು ಶಾಸಕರು ಈಗಾಗಲೇ ದೆಹಲಿ ತಲುಪಿದ್ದಾರೆ. ಇತರರು ಇಂದು (ಸೋಮವಾರ) ಆಗಮಿಸಲಿದ್ದಾರೆ. ನಾಳೆ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಎಷ್ಟು ಕುಕಿ ಶಾಸಕರು ಉಪಸ್ಥಿತರಿರುತ್ತಾರೆ ಎಂಬುದು ನಮಗೆ ಖಚಿತವಿಲ್ಲ ಆದರೆ ಎಲ್ಲಾ ಸಮುದಾಯಗಳ ಶಾಸಕರು ಇರುತ್ತಾರೆ ಎಂದು ಭರವಸೆ ನೀಡಲಾಗಿದೆ ಎಂದು ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಸೆಪ್ಟೆಂಬರ್ 17 ರಂದು ಸಹಜ ಸ್ಥಿತಿಗೆ ಮರಳಲು ಎಂಎಚ್‌ಎ ಎರಡೂ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದ್ದರು. ರಾಜ್ಯವು ಜನಾಂಗೀಯ ಆಧಾರದ ಮೇಲೆ ವಿಭಜಿಸಲ್ಪಟ್ಟಿದೆ ಮತ್ತು ಕಣಿವೆ ಜಿಲ್ಲೆಗಳಲ್ಲಿ ವಾಸಿಸುವ ಮೈತೆಯಿ ಮತ್ತು ಕುಕಿಗಳು ಮತ್ತೆ ಬೆಟ್ಟದ ಜಿಲ್ಲೆಗಳಿಗೆ ತೆರಳಿದ್ದಾರೆ.

ಮಣಿಪುರದಲ್ಲಿ ಕುಕಿ ಹಾಗೂ ಮೈತೈ ಸಮುದಾಯಗಳ ಮಧ್ಯೆ 2023ರ ಮೇ 3ರಿಂದಲೂ ಹಿಂಸಾಚಾರ ಭುಗಿಲೆದ್ದಿದೆ. ಇದುವರೆಗೆ ಮಣಿಪುರದಲ್ಲಿ ನಡೆದ ಹಿಂಸಾಚಾರಗಳಿಂದ ಸುಮಾರು 200ಕ್ಕೂ ಅಧಿಕ ಜನ ಮೃತಪಟ್ಟಿದ್ದು, ಸಾವಿರಾರು ಜನ ಗಾಯಗೊಂಡಿದ್ದಾರೆ. ಮಣಿಪುರ ಬಿಕ್ಕಟ್ಟಿನ ಕುರಿತು ಮಾತುಕತೆಗೆ ಸಿದ್ಧ ಎಂದು ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದರೂ ಹಿಂಸಾಚಾರ ನಿಲ್ಲುತ್ತಿಲ್ಲ. ಅಲ್ಲದೆ, ಮಣಿಪುರ ಹಿಂಸಾಚಾರ ಪ್ರಕರಣವು ಸಂಸತ್‌ ಅಧಿವೇಶನದಲ್ಲೂ ಪ್ರತಿಧ್ವನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಮಣಿಪುರದಲ್ಲಿ ಶಾಂತಿಸ್ಥಾಪನೆಯ ಭರವಸೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Pralhad Joshi: ಹರಿಯಾಣ, ಜಮ್ಮು-ಕಾಶ್ಮೀರ ಫಲಿತಾಂಶ ಮೋದಿ ಸಮರ್ಥ ನಾಯಕತ್ವಕ್ಕೆ ನಿದರ್ಶನ ಎಂದ ಜೋಶಿ