ಇಂಫಾಲ್: ಮಣಿಪುರದಲ್ಲಿ ಮತ್ತೆ ದಂಗೆ (Manipur Unrest) ಮರುಕಳಿಸಿದ್ದು ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ. ಈ ನಡುವೆ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ (N Biren Singh) ಅವರು ರಾಜ್ಯದಲ್ಲಿ ಮತ್ತೆ ಹೊಸದಾಗಿ ದಂಗೆ ಕಾಣಿಸಿಕೊಳ್ಳಲು ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳೇ ಕಾರಣ ಎಂದು ಹೊಸ ಆರೋಪವನ್ನು ಮಾಡಿದ್ದಾರೆ. ಮಾತ್ರವಲ್ಲದೇ, ಕಾಂಗ್ರೆಸ್ (Congress) ನಾಯಕ ಪಿ. ಚಿದಂಬರಂ (P Chidambaram) ಅವರನ್ನು ಟೀಕಿಸಿ, “ಈ ಬಿಕ್ಕಟ್ಟಿನ ಸೃಷ್ಟಿಕರ್ತ” ಎಂದು ದೂಷಿಸಿದ್ದಾರೆ.
ಪಿ ಚಿದಂಬರಂ ಅವರು ತಮ್ಮ ʼಎಕ್ಸ್ʼ (X) ಖಾತೆಯಲ್ಲಿ, ʼಮೈತೆಯಿ, ಕುಕಿ-ಝೊ ಹಾಗೂ ನಾಗಾ ಜನರಿಗೆ ನೈಜ ಧಾರ್ಮಿಕ ಸ್ವಾಯತ್ತತೆ ಇದ್ದರಷ್ಟೇ ಅವರು ಒಂದೇ ರಾಜ್ಯದಲ್ಲಿ ಬದುಕಬಲ್ಲರುʼ ಎಂಬ ಪೋಸ್ಟ್ ಒಂದನ್ನು ಹಾಕಿದ್ದರು. ಈ ಪೋಸ್ಟ್ ಹಾಕಿದ ಕೆಲವು ಸಮಯಗಳ ಬಳಿಕ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಚಿದಂಬರಂ ಮೇಲೆ ಹರಿಹಾಯ್ದಿದ್ದಾರೆ.
ಮಣಿಪುರ ಕಾಂಗ್ರೆಸ್ ಮುಖ್ಯಸ್ಥ ಕೈಶಮ್ ಮೇಘಚಂದ್ರ ಅವರ ಮನವಿಯ ಮೇರೆಗೆ ಪಿ ಚಿದಂಬರಂ ಅವರು ತಮ್ಮ ಈ ʼಎಕ್ಸ್ʼ ಪೋಸ್ಟನ್ನು ಬಳಿಕ ಡಿಲೀಟ್ ಮಾಡಿದ್ದರು. “ದಯವಿಟ್ಟು ಈ ಪೋಸ್ಟನ್ನು ಡಿಲೀಟ್ ಮಾಡಿ. ಮಣಿಪುರದ ಪರಿಸ್ಥಿತಿ ಸಂಪೂರ್ಣ ಗೊಂದಲಮಯವಾಗಿದೆ. ಇದು ತುಂಬಾ ಸೂಕ್ಷ್ಮವಾದ ವಿಚಾರವಾಗಿದೆ ಎಂದು ಮೇಘಚಂದ್ರ ಅವರು ಚಿದಂಬರಂ ಅವರಲ್ಲಿ ಮನವಿಮಾಡಿಕೊಂಡಿದ್ದರು. ಬಳಿಕವಷ್ಟೇ ಚಿದಂಬರಂ ಅವರು ಈ ಪೋಸ್ಟನ್ನು ಡಿಲೀಟ್ ಮಾಡಿದ್ದರು.
ಚಿದಂಬರಂ ಅವರ ಈ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಮಣಿಪುರದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಓ ಇಬೊಬಿ ಸಿಂಗ್ ಅವರು, ಇದು ಚಿದಂಬರಂ ಅವರ ವೈಯಕ್ತಿಕ ಅಭಿಪ್ರಾಯ ಮತ್ತು ಇದು ಪಕ್ಷದ ನಿಲುವು ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಭಾಗದಲ್ಲಿ ಬಹುಸಂಖ್ಯಾತರಾಗಿರುವ ಮೈತೆಯಿ ಸಮುದಾಯದವರು ಮಣಿಪುರದ ಭೂಪ್ರದೇಶದ ಸ್ವಾಯತ್ತತೆಯ ನೆಲೆಯಲ್ಲಿ ರಕ್ಷಣೆಯನ್ನು ಕೋರುತ್ತಿದ್ದಾರೆ, ಕುಕಿ ಬುಡಕಟ್ಟು ಸಮುದಾಯ “ಪ್ರತ್ಯೆಕ ಆಡಳಿತ ವ್ಯವಸ್ಥೆʼಯನ್ನೇ ಬಯಸುತ್ತಿದೆ. ಇದರಲ್ಲಿ ಮಯನ್ಮಾರ್ ನೊಂದಿಗೆ ಗಡಿ ಹಂಚಿಕೊಂಡಿರುವ ಬೆಟ್ಟ ಪ್ರದೇಶಗಳ ಬಹುದೊಡ್ಡ ಭೂಪ್ರದೇಶವೂ ಸೇರಿದೆ. ಮತ್ತು ನಾಗಾ ಜನಾಂಗದವರು ಈಶಾನ್ಯ ಭಾಗದಲ್ಲಿ ನಾಗಾ ಜನಾಂಗ ವಾಸಿಸುತ್ತಿದ್ದ ಭೂಪ್ರದೇಶದ ಹಕ್ಕನ್ನು ಕೇಳುತ್ತಿದ್ದಾರೆ. ಕುಕಿ ಜನಾಂಗದವರು ಮಯಾನ್ಮಾರ್ ನ ಚಿನ್ ರಾಜ್ಯ ಮತ್ತು ಮಿಝೊರಾಂನ ಜನರೊಂದಿಗೆ ಜನಾಂಗೀಯ ಸಂಬಂಧವನ್ನು ಹೊಂದಿದ್ದಾರೆ.
ಈ ಸುದ್ದಿಯನ್ನೂ ಓದಿ: ಜನವರಿ 14 ರಿಂದ ಮಣಿಪುರದಿಂದ ಮುಂಬೈಗೆ ಭಾರತ್ ಜೋಡೋ ಯಾತ್ರೆ
ಮಣಿಪುರದ ಜಿರಿಬಾಮ್ ರಾಜ್ಯದಲ್ಲಿ ಇದೀಗ ಹೊಸದಾಗಿ ಪ್ರಾರಂಭವಾಗಿರುವ ಜನಾಂಗೀಯ ಘರ್ಷಣೆಗೆ ಈಗಾಗಲೇ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು 19 ಜನ ಬಲಿಯಾಗಿದ್ದಾರೆ. ಇದನ್ನು ಹತ್ತಿಕ್ಕುವಲ್ಲಿ ಮುಖ್ಯಮಂತ್ರಿ ಮತ್ತು ಅವರ ನೇತೃತ್ವದ ಸರಕಾರ ಕಾರ್ಯಪ್ರವೃತ್ತವಾಗಿರುವ ಸಂದರ್ಭದಲ್ಲೇ ಚಿದಂಬರಂ ಅವರ ಈ ಪೋಸ್ಟ್ ಹೊಸ ವಿವಾದವನ್ನು ಹುಟ್ಟುಹಾಕಿದ್ದು, ಇದಕ್ಕೆ ಮುಖ್ಯಮಂತ್ರಿ ಸಿಂಗ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
2008ರಲ್ಲಿ ಆಗಿನ ಯುಪಿಎ ಸರಕಾರದಲ್ಲಿ ಕೇಂದ್ರ ಗೃಹ ಸಚಿವರಾಗಿದ್ದ ಪಿ ಚಿದಂಬರಂ ಅವರು ಹನ್ನೆರಡಕ್ಕೂ ಹೆಚ್ಚಿನ ಕುಕಿ-ಝೊ ಭಯೋತ್ಪಾದಕರು ಮತ್ತು ಕೇಂದ್ರ ಸರಕಾರ ಹಾಗೂ ಆಗ ಮಣಿಪುರದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದೊಂದಿಗೆ ವಿವಾದಾತ್ಮಕ ಮೂರು ಪಕ್ಷಗಳ ನಡುವಿನ ಕಾರ್ಯಾಚರಣೆ ರದ್ದು ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿದ್ದರು ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ಮಾಹಿತಿ ನೀಡಿದ್ದಾರೆ.
“ ಪಿ ಚಿದಂಬರಂ ಅವರು ಕೇಂದ್ರ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಮತ್ತು ಓ ಇಬೊಬಿ ಇಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಯನ್ಮಾರಿ ವಿದೇಶಿಗನಾಗಿದ್ದ ಹಾಗೂ ಅಲ್ಲಿ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದ್ದ,ಮಾತ್ರವಲ್ಲದೇ ಮಯನ್ಮಾರ್ ಮೂಲದ ಝೊಮಿ ರೆವೊಲೂಷನರಿ ಆರ್ಮಿಯ ಅಧ್ಯಕ್ಷನಾಗಿದ್ದ ತಂಗ್ಲಿನ್ ಪೌ ಗುಯ್ಟ್ ಅವರನ್ನು ಕರೆ ತಂದಿದ್ದರು ಎಂಬ ವಿಚಾರವನ್ನು ನಾನೀಗ ಬಹಿರಂಗವಾಗಿ ಹೇಳುತ್ತಿದ್ದೇನೆʼ ಎಂದು ಬಿರೇನ್ ಸಿಂಗ್ ಕಾಂಗ್ರೆಸ್ ಹಾಗೂ ಚಿದಂಬರಂ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
“ಆಗಿನ ಕೇಂದ್ರ ಗೃಹ ಸಚಿವ ಪಿ ಚಿದಂಬರಂ ಮತ್ತು ತಂಗ್ಲಿನ್ ಪೌ ಗುಯ್ಟ್ ಒಟ್ಟಾಗಿ ಇರುವ ಫೊಟೋ ಇದೆ ಇದು ನನ್ನನ್ನುಆಶ್ಚರ್ಯಚಕಿತನನ್ನಾಗಿಸಿದೆ – ಆ ಸಂದರ್ಭದಲ್ಲಿ ಅವರು ಈಶಾನ್ಯ ರಾಜ್ಯದ ಜನರ ಕಾಳಜಿಯನ್ನೇ ವಹಿಸಿರಲಿಲ್ಲ ಎಂದು ಬಿರೇನ್ ಸಿಂಗ್ ನೇರ ಆರೋಪವನ್ನು ಮಾಡಿದ್ದಾರೆ. ಈ ಭಾವಚಿತ್ರದಲ್ಲಿ ಚಿದಂಬರಂ ಅವರು ತಂಗ್ಲಿನ್ ಪೌ ಗುಯ್ಟ್ ಅವರ ಕೈ ಕುಲುಕುತ್ತಿರುವುದನ್ನು ಕಾಣಬಹುದಾಗಿದೆ.
ಈಗ ಉದ್ಭವಿಸಿರುವ ಬಿಕ್ಕಟ್ಟು ಜನಾಂಗೀಯ ಬಿಕ್ಕಟ್ಟಲ್ಲ ಬದಲಾಗಿ ಮಯನ್ಮಾರ್ ನಿಂದ ಮಾದಕ ದ್ರವ್ಯಗಳನ್ನು ಹಿಡಿದುಕೊಂಡು ಕಾನೂನು ಬಾಹಿರವಾಗಿ ಭಾರತದೊಳಗೆ ನುಸುಳುವವರ ಸಮಸ್ಯೆ ಇದಾಗಿದೆ ಮತ್ತು ಅವರನ್ನು ಮಣಿಪುರದ ಜನರು ನಿಯಂತ್ರಿಸಲು ಯತ್ನಿಸುತ್ತಿದ್ದಾರೆ. ಈ ನಡುವೆ ಚಿದಂಬರಂ ಅವರ ಮಾತುಗಳು ನನಗೆ ಹಾಸ್ಯಾಸ್ಪದವಾಗಿ ಕಾಣಿಸುತ್ತಿವೆ. ನಾನು ಚಿದಂಬಂರಂ ಅವರಿಗೆ ಈ ಫೊಟೋಗಳನ್ನು ತೋರಿಸುವ ಮೂಲಕ, ಅಂದು ಅವರು ಆ ವಿದೇಶಿಗರನ್ನು ಯಾಕ ಭಾರತದ ನೆಲದೊಳಕ್ಕೆ ಕಾಲಿಡಲು ಬಿಟ್ಟರು ಎಂಬುದನ್ನು ಕೇಳಲು ಬಯಸುತ್ತೇನೆ ಎಂದು ಮುಖ್ಯಮಂತ್ರಿ ಸಿಂಗ್ ಪ್ರಶ್ನಿಸಿದ್ದಾರೆ. ಮತ್ತು ಈ ಎಲ್ಲಾ ಬಿಕ್ಕಟ್ಟಿಗೆ ಕಾಂಗ್ರೆಸ್ ಪಕ್ಷ ಮತ್ತು ಅಂದು ಕೇಂದ್ರ ಗೃಹ ಸಚಿವರಾಗಿದ್ದ ಚಿದಂಬಂ ಅವರೇ ನೇರ ಹೊಣೆ ಎಂದು ಬಿರೇನ್ ಸಿಂಗ್ ಅವರು ಕಿಡಿಕಾರಿದ್ದಾರೆ.
ಮಣಿಪುರದ ಹಲವಾರು ಗ್ರಾಮಗಳಲ್ಲಿರುವ ಗುಡ್ಡಪ್ರದೇಶಗಳಲ್ಲಿ ಕುಕಿ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದು, ಇದರ ಸುತ್ತ ಇರುವ ಕಣಿವೆಗಳಲ್ಲಿ ಮೈತೆಯಿ ಜನಾಂಗದವರ ಪ್ರಾಬಲ್ಯವಿದೆ. ಇಲ್ಲಿರುವ ಸುಮಾರು 12ಕ್ಕೂ ಹೆಚ್ಚಿನ ಕುಕಿ ಬುಡಕಟ್ಟು ಜನಾಂಗಗಳು ಕೆಲವೊಂದು ಗುಡ್ಡಗಾಡು ಪ್ರದೇಶಗಳಲ್ಲಿ ಪ್ರಾಬಲ್ಯವನ್ನು ಹೊಂದಿದ್ದು, ಈ ಘರ್ಷಣೆಯಲ್ಲಿ ಇದುವರೆಗೂ 220 ಜನರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದು, ಸುಮಾರು 50 ಸಾವಿರ ಜನ ನಿರಾಶ್ರಿತರಾಗಿದ್ದಾರೆ.
ಜನರಲ್ ಕೆಟಗರಿಯಡಿಯಲ್ಲಿ ಬರುವ ಮೈತೆಯಿ ಜನಾಂಗದವರು ತಮಗೆ ಪರಿಶಿಷ್ಟ ಪಂಗಡದ ಸ್ಥಾನಮಾನ್ಕೆ ಬೇಡಿಕೆ ಇಟ್ಟಿದ್ದರೆ, ಮಯನ್ಮಾರ್ ಮತ್ತು ಮಿಝೋರಾಂನೊಂದಿಗೆ ಜನಾಂಗೀಯ ಸಂಬಂಧಗಳನ್ನು ಹೊಂದಿರುವ ಕುಕಿ ಜನಾಂಗದವರು ತಮಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ.